ಬಿಜೆಪಿ ಅಲ್ಲ, ಬ್ಯಾಡ್ ಜನತಾ ಪಾರ್ಟಿ: ಶಿವಪ್ಪ
ಸಕಲೇಶಪುರ: ರಾಜ್ಯದಲ್ಲಿ ಇರುವುದು ಭಾರತೀಯ ಜನತಾ ಪಾರ್ಟಿಯಲ್ಲ, ಬ್ಯಾಡ್ ಜನತಾ ಪಾರ್ಟಿ. ಈ ಪಕ್ಷದಲ್ಲಿ ಈಗ ಸಮಯ ಸಾಧಕರು, ಸ್ವಾರ್ಥಿಗಳೇ ತುಂಬಿ ಹೋಗಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಬಿ.ಬಿ. ಶಿವಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುರುವಾರ ತಮ್ಮ ಕುಂಬ್ರಹಳ್ಳಿಯ ಸ್ವಗೃಹದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಸ್ವಜನ ಪಕ್ಷಪಾತ, ನಿಷ್ಠಾವಂತರನ್ನು ತುಳಿಯುವ ಉದ್ದೇಶದಿಂದ ಕೊಡಿರುವ ಒಂದು ವರ್ಗದಿಂದಾಗಿ ಈ ಬಾರಿ ರಾಜ್ಯದಲ್ಲಿ ಗೆಲ್ಲಬಹುದಾಗಿದ್ದ ಹಲವು ಲೋಕಸಭ ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ತಮ್ಮ ಅಸಮಾಧಾನ ಹೊರಹಾಕಿದರು.
ಹಾಸನ ಜಿಲ್ಲೆಗೆ ಮೈಸೂರಿನ ವ್ಯಕ್ತಿಯನ್ನು ಹಾಗೂ ಹಾಸನದ ವ್ಯಕ್ತಿಯನ್ನು ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡಲು ಅವಕಾಶ ಮಾಡಿರುವುದರ ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರೊಂದಿಗೆ ರಾಜ್ಯ ಬಿಜೆಪಿ ನಾಯಕರು ಮಾಡಿಕೊಂಡಿರುವ ಒಪ್ಪಂದವೇ ಕಾರಣವಾಗಿದೆ ಎಂದು ಆರೋಪಿಸಿದರು.
ಸಮಯ ಸಾಧಕರಿದ್ದಾರೆ: ಬಿಜೆಪಿಗಾಗಿ ಸರ್ವಸ್ವವನ್ನೂ ತ್ಯಾಗಮಾಡಿದ ನನಗೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಲು ಯಾವುದೆ ಕಾರಣವನ್ನೂ ನೀಡದ ರಾಜ್ಯ ಬಿಜೆಪಿ ನಾಯಕರು, ಜಿಲ್ಲೆಯ ಎಲ್ಲಾ ತಾಲೂಕು ಸಮಿತಿಗಳು ಹಾಗೂ ಜಿಲ್ಲಾ ಸಮಿತಿ ಬಿ.ಬಿ.ಶಿ ವಪ್ಪನವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಈ ಸಮಿತಿಗಳ ಮನವಿಯನ್ನು ತಿರಸ್ಕರಿಸಿ ಅಭ್ಯರ್ಥಿಗಳನ್ನು ಮೇಲಿನಿಂದ ಹೇರುವುದು ಬಾರತೀಯ ಜನತಾ ಪಕ್ಷದ ಸಿದ್ಧಾಂತವಲ್ಲ. ಅಟಲ್ ಬಿಹಾರಿ ವಾಜಪೇಯಿ, ಪಂಡಿತ್ ದೀನ್ದಯಾಳ್ ಉಪಾಧ್ಯಯರಿದ್ದ ಬಿಜೆಪಿ ಈಗಿಲ್ಲ. ಈಗ ಪಕ್ಷದ ತುಂಬೆಲ್ಲ ಸ್ವಾರ್ಥಿಗಳು, ಸಮಯ ಸಾಧಕರೇ ತುಂಬಿ ಹೋಗಿದ್ದಾರೆ ಎಂದರು.
ಚರ್ಚಿಸಿಲ್ಲ: ಪಕ್ಷವನ್ನು ನೆಲಮಟ್ಟದಿಂದ ಕಟ್ಟಿ ಬೆಳಸುವ ಸಂದರ್ಭದಲ್ಲಿ ಈಗಿರುವ ನಾಯಕರು ಎಲ್ಲಿದ್ದರು? ನನ್ನ ಮುಂದೆ ಟಿಕೇಟ್ಗಾಗಿ ಕಾದು ಕುಳಿತಿದ್ದವರೆಲ್ಲ ಈಗ ನಾಯಕರಾಗಿದ್ದು, ಹಾಸನ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆ ಮಾಡುವ ಮುನ್ನ ನನ್ನೊಂದಿಗೆ ಚರ್ಚಿಸುವಷ್ಟೂ ಸೌಜನ್ಯ ತೋರದಿರುವುದು ಈ ಪಕ್ಷ ಹಿರಿಯರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದನ್ನು ಸೂಚಿಸುತ್ತದೆ ಎಂದರು.
ಈ ಬಾರಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುವುದಿಲ್ಲ ಎಂದು ಅವರು ಸ್ವಷ್ಟಪಡಿಸಿದರು.