ಭ್ರೂಣ ಹತ್ಯೆ ಅಪರಾಧ: ನ್ಯಾ. ಚಂದ್ರಕಲಾ
ಅರಸೀಕೆರೆ: ಹೆರಿಗೆಗೂ ಮುನ್ನ ಭ್ರೂಣಲಿಂಗ ಪತ್ತೆ ಬಗ್ಗೆ ತಿಳಿದುಕೊಳ್ಳುವುದು ಹಾಗೂ ತಿಳಿಸುವುದು ಎರಡು ಕಾನೂನು ರೀತಿಯಲ್ಲಿ ಅಪರಾಧವೆಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಮತ್ತು ಅರಸೀಕೆರೆ ಜೆ.ಎಂ.ಎಫ್.ಸಿ. ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಇ. ಚಂದ್ರಕಲಾ ತಿಳಿಸಿದರು.
ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಮತ್ತು ಆರೋಗ್ಯ ಇಲಾಖೆ ಆಶ್ರಯದಲ್ಲಿ ಪಟ್ಟಣದ ಜೆಸಿ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಯಿ ಹಾಗೂ ಹೆಂಡತಿಯಾಗಿ ಹೆಣ್ಣು ಬೇಕು ಎನ್ನುವ, ಪುರುಷರು ಮಗಳಾಗಿ ಹೆಣ್ಣು ಮಗು ಬೇಡ ಎನ್ನುವುದು ಅತ್ಯಂತ ವಿಷಾದದ ಸಂಗತಿಯಾಗಿದ್ದು ಹೆಣ್ಣು ಭ್ರೂಣ ಹತ್ಯೆ ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಹೋರಾಟ ನಡೆಸುವ ಅಗತ್ಯವಿದೆ ಎಂದರು.
ಕಳವಳ: ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಪ್ರಕಾಶ್ ಚೆನ್ನಪ್ಪ ಕುರುಬೆಟ್ ಮಾತನಾಡಿ, ದಿನದಿಂದ ದಿನಕ್ಕೆ ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಲಿಂಗಾನುಪಾತದಲ್ಲಿ ವ್ಯತ್ಯಾಸವಾಗುತ್ತಿದ್ದು ಹೆಣ್ಣುಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಜನಪರ ಸಂಘ ಸಂಸ್ಥೆಗಳು ಹತ್ತಾರು ಕಾರ್ಯಕ್ರಮಗಳನ್ನು ರೂಪಿಸಿ, ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಹೆಣ್ಣು ಭ್ರೂಣ ಹತ್ಯೆಯಾಗುತ್ತಿರುವುದು ಆತಂಕಕಾರಿಯಾದ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.
ಹಿಂಸಾತ್ಮಕ ವಾತಾರಣವೂ ಕಾರಣ: ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎಸ್. ದಿನೇಶ್ ಮಾತನಾಡಿ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಮೂಢನಂಬಿಕೆಗಳಿಂದಲೇ ಹೆಣ್ಣು ಭ್ರೂಣ ಹತ್ಯೆಯಾಗುತ್ತಿದೆಯಲ್ಲದೇ, ವರದಕ್ಷಿಣೆ ಪಿಡುಗು ಹಾಗೂ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚೆಚ್ಚಾಗಿ ಕೇಳಿ ಬರುತ್ತಿರುವುದೂ ಸಹ ಪೋಷಕರು ಹೆಣ್ಣು ಮಕ್ಕಳು ಬೇಡ ಎನ್ನುವುದಕ್ಕೆ ಕಾರಣವಾಗಿದೆ ಎಂದರು.
ಹೇಯ ಕೃತ್ಯ: ಅಲ್ಲದೇ, ವೈದ್ಯಕೀಯ ಕ್ಷೇತ್ರದಲ್ಲಿನ ಆಧುನಿಕತೆಯನ್ನು ಜನ ಸೇವೆಗೆ ಬಳಸದೇ ಕೆಲ ವೈದ್ಯರು ಹಣ ಗಳಿಕೆಗೆ ಬಳಸಿಕೊಳ್ಳುವುದು ಅತ್ಯಂತ ಹೇಯ ಸಂಗತಿಯೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಏಡ್ಸ್ ರೋಗದ ಬಗ್ಗೆ ಸರ್ಕಾರ ರೂಪಿಸಿರುವ ಕಾರ್ಯಕ್ರಮವನ್ನು ಕುರಿತು ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯ ಆಪ್ತ ಸಮಲೋಚಕಿ ಉಮಾ ಉಪನ್ಯಾಸ ನೀಡಿದರೆ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ.ಆರ್. ಸರ್ವೇಶ್, ಕಾರ್ಯದರ್ಶಿ ಒವಿ. ಶಿವಕುಮಾರ್ ಸಹಾಯಕ ಸರಕಾರಿ ವಕೀಲರಾದ ಮಮತ ಲೋಕೇಶ್, ರೋಟರಿ ಸಂಸ್ಥೆಯ ಅಧ್ಯಕ್ಷ ಪ್ರವೀಣ್ ಕುಮಾರ್ ಹಾಗೂ ಇತರರು ಇದ್ದರು.