ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಹಿಳಾ ದಿನಾಚರಣೆ ಪ್ರಯುಕ್ತ ಸಾಧಕಿಯರಿಗೆ ಸನ್ಮಾನ

Mainashree
Updated On : 20 Mar 2014, 10:20 am

ಹಾಸನ: ನಗರದ ಎ.ವಿ. ಕಾಂತಮ್ಮ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ವಿಶಿಷ್ಟ ಸೇವೆ ಸಲ್ಲಿಸಿದ ಮಹಿಳೆಯರಿಗೆ ಸನ್ಮಾನ ಸಮಾರಂಭ ಗುರುವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಾಧ್ಯಕ್ಷ ಬಿ.ಆರ್. ಗುರುದೇವ್ ಮಾತನಾಡಿ, ಬೇರೆ ದೇಶಗಳ ಸಂಸ್ಕೃತಿಯನ್ನು ಸ್ವೀಕರಿಸಿದರೂ ನಮ್ಮದೇ ಆದ ಸಂಸ್ಕೃತಿಯನ್ನು ನಾವು ಗೌರವಿಸುತ್ತಿರುವುದು ತುಂಬಾ ಸಂತೋಷದ ವಿಷಯ. 12ನೇ ಶತಮಾನದ ಬಸವಾದಿ ಶರಣರು ಮಹಿಳೆಯ ಸಮಾನತೆಯನ್ನು ಪ್ರತಿಪಾದಿಸಿ ಹೊಸ ಸಮಾನತೆಯ ಸಮಾಜದ ನಿರ್ಮಾತೃಗಳಾದರು. ಇಂದಿನ ಪುರುಷರು ಸಹ ಸ್ತೀಯರಿಗೆ ಸಮಾನ ಸ್ಥಾನಮಾನಗಳನ್ನು ನೀಡುವ ಮೂಲಕ ಮಾತೃ ಸ್ವರೂಪಿಯಾದ ಸ್ತೀಯನ್ನು ಗೌರವಿಸಬೇಕು ಎಂದರು.
ಸಾಧನೆ ಮಾಡಬೇಕು: ಕಾಲೇಜಿನ ಪ್ರಾಂಶುಪಾಲೆ ಡಾ.ಜೆ. ಶೈಲಜಾ ಕುಮಾರಿ ಮಾತನಾಡಿ, ಸ್ತ್ರೀಯರು ಸ್ವಾವಲಂಬಿಗಳಾಗಿ ಜೀವನ ಸಾಗಿಸಲು ಸರ್ಕಾರದಿಂದ ಉತ್ತಮ ಯೋಜನೆಗಳು ಜಾರಿಗೆ ಬಂದಿರುವುದಾದರೂ ಪುರುಷ ಪ್ರಧಾನ ಸಮಾಜದಲ್ಲಿ ಅನೇಕ ಅಂತಾರಾಷ್ಟ್ರೀಯ ಪ್ರಯತ್ನಗಳ ನಡುವೆಯೂ ಇಂದು ಮಹಿಳೆಯ ಸ್ಥಿತಿಗತಿ, ಸ್ಥಾನಮಾನಗಳನ್ನು ಉತ್ತಮಗೊಳಿಸುವುದು ಬಹಳಷ್ಟು ಮಟ್ಟಿಗೆ ಸಾಧ್ಯವಾಗಿಲ್ಲ ಎಂದರು.  ಮಹಿಳೆಯರು ಸಾಧನೆಯ ಪಥದಲ್ಲಿ ಮುನ್ನುಗ್ಗಬೇಕು. ಅದಕ್ಕೆ ಬೇಕಾದ ಶಿಕ್ಷಣವನ್ನು ಪಡೆಯಬೇಕೆಂದು ಅವರು ಸಲಹೆ ನೀಡಿದರು.
ಕಿವಿಮಾತು: ಪ್ರಸೂತಿ ತಜ್ಞೆ ಪುಟ್ಟಮ್ಮ ಮಾತನಾಡಿ, ಇಂದು ಮಹಿಳೆಯರ ಅಭಿವೃದ್ಧಿಗೆ ಸರ್ಕಾರ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿದೆ. ಅದನ್ನು ಬಳಸಿಕೊಂಡು ವಿದ್ಯಾರ್ಥಿನಿಯರು ಶಿಕ್ಷಣ ಪಡೆದು ಆ ಮೂಲಕ ಉತ್ತಮ ಸೇವೆಯನ್ನು ಸಮಾಜಕ್ಕೆ ಸಲ್ಲಿಸಬೇಕೆಂದು ಕಿವಿಮಾತು ಹೇಳಿದರು.
ಸೇವೆ ಸಲ್ಲಿಸಬೇಕು: ನಗರದ ಪ್ರಸಿದ್ದ ವಸ್ತ್ರ ವಿನ್ಯಾಸಕಿ ರತ್ನಾವತಿ ಅವರು, ವಿದ್ಯಾರ್ಥಿನಿಯರು ಕಲಿಯುವ ಸಮಯದಲ್ಲಿ ಉತ್ತಮ ಮೌಲ್ಯಗಳನ್ನು ಕಲಿತು, ರೂಢಿಸಿಕೊಂಡು ಸಮಾಜಕ್ಕೆ ಉಪಯುಕ್ತ ಸೇವೆ ಸಲ್ಲಿಸಲು ಮುಂದಾಗಬೇಕು ಎಂದರು.
ಯೋಗ ತರಬೇತುದಾರರಾದ ರಜತ ಗುಪ್ತಾ ಮಾತನಾಡಿ, ಮಾನಸಿಕ ಆರೋಗ್ಯದಿಂದ ದೈಹಿಕ ಆರೋಗ್ಯವನ್ನು ಪಡೆಯಬಹುದು. ಮನಸ್ಸು ಮತ್ತು ದೇಹ ಸದೃಢವಾಗಲು ಯೋಗ ಅತ್ಯುತ್ತಮ ಸಾಧನ ಎಂದು ಸಲಹೆ ನೀಡಿದರು.
ತಟ್ಟೆಕೆರೆ ಜಯಮ್ಮ ಅವರು ಸುಶ್ರಾವ್ಯವಾಗಿ ಸೋಬಾನೆ ಪದ ಹಾಡಿದರು.
ವೈದ್ಯೆ ಪುಟ್ಟಮ್ಮ, ಜನಪದ ಕಲಾವಿದೆ ತಟ್ಟೆಕೆರೆ ಜಯಮ್ಮ, ವಸ್ತ್ರ ವಿನ್ಯಾಸಕಿ ರತ್ನಾವತಿ, ಯೋಗ ತರಬೇತುದಾರೆ ರಜಿತ ಗುಪ್ತಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.  
ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ವರ್ಗದವರು ಮತ್ತು ವಿದ್ಯಾರ್ಥಿನಿಯರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement