ವೀರೇಂದ್ರ ಪಾಟೀಲರ ಸಿಎಂ ಸ್ಥಾನ ಕಬಳಿಸಿದವರು ಯಾರು?
ಅರಸೀಕೆರೆ: ಮುತ್ಸದಿ ರಾಜಕಾರಣಿ ದಿವಂಗತ ವಿರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಸ್ಥಾನವನ್ನು ವಿಮಾನ ನಿಲ್ದಾಣದಿಂದಲೇ ಕಿತ್ತು ಹಾಕಿದವರು ಯಾರು ಎಂಬುದನ್ನು ಕಾಂಗ್ರೆಸ್ಸಿಗರು ಹೇಳಬೇಕು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಸವಾಲು ಹಾಕಿದ್ದಾರೆ.
ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವರಿಗೆ ಕಾಂಗ್ರೆಸ್‌ನ ಕೊಡುಗೆ ಏನು, ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರನ್ನು ವಿಮಾನ ನಿಲ್ದಾಣದಲ್ಲಿ ಪದಚ್ಯುತಗೊಳಿಸಿದ ನಂತರ ವೀರಶೈವರಿಗೆ ಕಾಂಗ್ರೆಸ್‌ನಲ್ಲಿ ಯಾವುದೇ ಸ್ಥಾನಮಾನ ನೀಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಅಲ್ಲದೇ, ಈಗ ವೀರಶೈವರ ಮತ ಪಡೆಯಲು ಕಾಂಗ್ರೆಸ್ ನಡೆಸುತ್ತಿರುವ ತಂತ್ರ ಫಲಕಾರಿಯಾಗುವುದಿಲ್ಲ ಎಂದು ಅವರು ಎಚ್ಚರಿಸಿದರು. ಮಾಜಿ ಸಿಎಂ ಯಡಿಯೂರಪ್ಪನವರನ್ನು ಉದಾಹರಣೆಯಾಗಿ ನೀಡಿ ಹಾಸನ ಜಿಲ್ಲೆಗೆ ದೇವೇಗೌಡರ ಕೊಡುಗೆ ಏನು ಎಂದು ಪ್ರಶ್ನಿಸುತ್ತಿರುವ ಕಾಂಗ್ರೆಸ್ ನಾಯಕರು, ಮೆಡಿಕಲ್, ಇಂಜಿನಿಯರಿಂಗ್, ಪಶು ವೈದ್ಯಕೀಯ, ಗೃಹ ವಿಜ್ಞಾನ ಸೇರಿದಂತೆ ಕಾಲೇಜುಗಳನ್ನು ತಂದವರು ಯಾರು ಎಂಬುದನ್ನು ಮೊದಲು ಅರಿತುಕೊಳ್ಳಲಿ ಎಂದು ಗುಡುಗಿದರು.
ದಾಖಲೆ ಬಿಡುಗಡೆಗೊಳಿಸಲಿ: ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಬರಲು ತಾವೇ ಕಾರಣರೆಂದು ಜನರನ್ನು ಮಾಜಿ ಸಚಿವ ಬಿ. ಶಿವರಾಂ ನಂಬಿಸಲು ಹೊರಟಿದ್ದಾರೆ. ಎತ್ತಿನಹೊಳೆ ಯೋಜನೆಯ ಬಗ್ಗೆ ಇವರ ಹೋರಾಟವೇನು, ಸರ್ಕಾರದ ಮೇಲೆ ಯಾವ ರೀತಿ ಒತ್ತಡ ತಂದಿದ್ದಾರೆ ಎಂಬ ದಾಖಲೆಗಳನ್ನು ಜನತೆಯ ಮುಂದೆ ಪ್ರದರ್ಶಿಸಲಿ ಎಂದು ಅವರು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಸಿದ್ದರಾಮಶೆಟ್ಟಿ, ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ಜಿಲ್ಲಾ ಉಪಾಧ್ಯಕ್ಷ ಎಚ್.ಎಸ್. ಶಂಕರಲಿಂಗಪ್ಪ, ಯುವ ಘಟಕದ ಅಧ್ಯಕ್ಷ ಬಾಣಾವರ ಅಶೋಕ್, ಗೊಲ್ಲರಹಳ್ಳಿ ಹನುಮಪ್ಪ, ಗ್ರಾ.ಪಂ. ಅಧ್ಯಕ್ಷ ನಾಗರಾಜು, ಎಸ್.ಟಿ. ಸಿದ್ದಯ್ಯ ಹಾಗೂ ಇತರರು ಇದ್ದರು.