ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ನಾಮಪತ್ರ ಸಲ್ಲಿಕೆ ಸೋಮವಾರ'

Mainashree
Updated On : 21 Mar 2014, 11:40 am

ಹಾಸನ: ಪಕ್ಷದ ಸೂಚನೆಯಂತೆ ಮಾ. 24ರಂದು ಬೆಳಗ್ಗೆ 12ರಿಂದ 12.30ರೊಳಗೆ ಹಾಸನ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಮಾಜಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಸಿ.ಎಚ್. ವಿಜಯ್ ಶಂಕರ್ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 22ರಿಂದಲೇ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರವಾಸವನ್ನು ಕೈಗೊಂಡು ಚುನಾವಣಾ ಪ್ರಚಾರ ನಡೆಸಲಾಗುತ್ತದೆ. ಜಿಲ್ಲೆಯಲ್ಲಿ ಬಿಜೆಪಿ ಬಗ್ಗೆ ಉತ್ತಮ ಅಭಿಪ್ರಾಯವಿದ್ದು, ಜಿಲ್ಲೆಯ ಜನತೆ ಈ ಬಾರಿ ಬಿಜೆಪಿ ಕೈ ಬಿಡುವುದಿಲ್ಲ ಎಂಬ ವಿಶ್ವಾಸವಿದೆ. ಚುನಾವಣಾ ಅಖಾಡಕ್ಕಿಳಿಯಲು ಸಜ್ಜುಗೊಂಡಿದ್ದೇನೆ. ಪಕ್ಷದ ಆದೇಶ ಹಾಗೂ ಸ್ಥಳೀಯ ಕಾರ್ಯಕರ್ತರ ಒತ್ತಾಸೆಗೆ ತಲೆ ಭಾಗಿ ಈ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದರು.
ಪಕ್ಷ ಮತ್ತು ದೈವ ಇಚ್ಛೆಗೆ ತಲೆಬಾಗಿ ಬಂದಿದ್ದೇನೆ. ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸುವಂತೆ ಪಕ್ಷ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ಮುಖಂಡ ಬಿ.ಬಿ. ಶಿವಪ್ಪನವರನ್ನು ಭೇಟಿ ಮಾಡಿ ಆಶೀರ್ವಾದ ಹಾಗೂ ಬೆಂಬಲ ಪಡೆದಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್, ಜೆಡಿಎಸ್ ತೊಲಗಿಸಬೇಕು:  ದೇಶದಲ್ಲಿ ಕಾಂಗ್ರೆಸ್ ಹಾಗೂ ಇಲ್ಲಿ ಜೆಡಿಎಸ್ನಿಂದ ನಡೆಯುತ್ತಿರುವ ಕುಟುಂಬ ರಾಜಕಾರಣವನ್ನು ಕೊನೆಗಾಣಿಸುವ ಕಾಲ ಬಂದಿದ್ದು, ದೇಶದಲ್ಲಿ ಇರುವ ನರೇಂದ್ರ ಮೋದಿ ಅಲೆಯಿಂದ ಮಾತ್ರ ಇದು ಸಾಧ್ಯವೆಂದರು.
ಎರಡು ದಿನ ಪ್ರವಾಸ: ನನ್ನನ್ನು ಇಲ್ಲಿನ ಸಂಸದನನ್ನಾಗಿ ಆಯ್ಕೆ ಮಾಡಿದರೆ ಜಿಲ್ಲೆಯಲ್ಲಿ ಸಂಸದರ ಕಚೇರಿ ತೆರೆದು ಒತ್ತಡದ ಕೆಲಸದ ನಡುವೆಯೂ ವಾರದಲ್ಲಿ ಎರಡು ದಿನ ಜಿಲ್ಲೆಯಲ್ಲಿ ಪ್ರವಾಸಕೈಗೊಳ್ಳುವುದಾಗಿ ತಿಳಿಸಿದ ವಿಜಯ ಶಂಕರ್, ಜಿಲ್ಲೆಯ ಸಮಸ್ಯೆಗಳ ನಿವಾರಣೆಯ ಧ್ಯೇಯದಲ್ಲಿ ಪ್ರಣಾಳಿಕೆ ಸಿದ್ಧಪಡಿಸುತ್ತಿದ್ದು, ಕೂಡಲೇ ಪ್ರಣಾಳಿಕೆ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಅಲ್ಲದೇ, ಜಿಲ್ಲೆಯ ಪ್ರಮುಖ ಸಮಸ್ಯೆಗಳಾದ ಕಾಡಾನೆ, ಆಲೂಗೆಡ್ಡೆಗೆ ಅಂಗಮಾರಿ ರೋಗ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ವಿಮಾನ ನಿಲ್ದಾಣ, ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಇರುವ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಉಸ್ತವಾರಿ ಹೊತ್ತಿರುವ ಅಶ್ವತ್ ನಾರಾಯಣ, ಮಾಜಿ ಶಾಸಕ ಬಿ.ಆರ್. ಗುರುದೇವ್, ಜಿಲ್ಲಾಧ್ಯಕ್ಷ ರೇಣುಕುಮಾರ್, ಪ್ರಾಣೇಶ್, ನಿರ್ವಹಣಯ್ಯ, ನವಿಲೆ ಅಣ್ಣಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement