ಪಕ್ಷ ವಾಕ್ಯ ಪರಿಪಾಲನೆ ಮಾಡಿದ್ದೇನೆ
ತಮ್ಮ 9ನೇ ವಯಸ್ಸಿನಿಂದಲೇ ಆರ್ಎಸ್ಎಸ್ ಸ್ವಯಂಸೇವಕರಾಗಿ, ನಂತರ ಭಾರತೀಯ ಜನತಾಪಕ್ಷದ ನಾನಾ ಹುದ್ದೆಗಳನ್ನು ನಿರ್ವಹಣೆ ಮಾಡಿ ಎಂಪಿ, ಎಂಎಲ್ ಎ, ಎಂಎಲ್ಸಿ ಮತ್ತು ಸಚಿವರಾಗಿಯೂ ಸುದೀರ್ಘ ರಾಜಕೀಯ ಅನುಭವ ಪಡೆದಿರುವ 57 ವರ್ಷ ವಯಸ್ಸಿನ ಮಾಜಿ ಸಂಸದ ಸಿ.ಎಚ್. ವಿಜಯಶಂಕರ್ ಕೊನೆಗೂ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಒಪ್ಪಿದ್ದಾರೆ. ಹಾಸನದಿಂದ ಸ್ಪರ್ಧಿಸಲು ನನ್ನಿಂದಾಗದು, ಆಗದು ಎಂದು ಹಠ ಹಿಡಿದಿದ್ದ ವಿಜಯಶಂಕರ್ ಈಗ ಹಾಸನದ ಅಭ್ಯರ್ಥಿಯಾಗಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು 'ಕನ್ನಡಪ್ರಭ'ದೊಂದಿಗೆ ಮಾತನಾಡಿದ್ದು ಹೀಗೆ.
ಪ್ರಶ್ನೆ: ಮೊದಲು ಹಾಸನ ಬೇಡವೇ ಬೇಡ ಎನ್ನುತ್ತಿದ್ದವರು ಈಗ ಒಪ್ಪಿದ್ದೀರಿ. ಈ ದಿಢೀರ್ ನಿರ್ಧಾರ ಏಕೆ ಮತ್ತು ಹೇಗೆ?
ವಿ.ಶಂ: ಹಾಸನ ಕ್ಷೇತ್ರವನ್ನು ನಾನು ಬೇಡ ಎಂದೇನೂ ಹೇಳಿರಲಿಲ್ಲ. ಮೈಸೂರು ನನಗೆ ಚಿರಪರಿಚಿತವಾದ ಕ್ಷೇತ್ರ. ಅಲ್ಲಿ ಚುನಾವಣೆಗೆ ನಿಂತರೆ ಸೂಕ್ತ ಎಂಬ ಅಭಿಪ್ರಾಯ ಮಂಡಿಸಿದ್ದೆ. ಈಗ ಪಕ್ಷದ ಮುಖಂಡರು ಹಾಸನದಲ್ಲಿ ನಿಲ್ಲಬೇಕು ಎಂದು ಸೂಚನೆ ನೀಡಿದ್ದಾರೆ. ಅದಕ್ಕೆ ಒಪ್ಪಿ ನಿಲ್ಲುತ್ತಿದ್ದೇನೆ. ಪಕ್ಷ ವಾಕ್ಯ ಪಾರಿಪಾಲನೆ ಮಾಡಿದ್ದೇನೆ.
ಪ್ರಶ್ನೆ: ಮೊದಲೇ ಪಕ್ಷ ವಾಕ್ಯ ಪರಿಪಾಲನೆ ಮಾಡಬಹುದಿತ್ತಲ್ಲ...?
ವಿ.ಶಂ: ನನ್ನನ್ನು ಮೈಸೂರಿನಿಂದ ನಿಲ್ಲಿಸಬೇಕೋ, ಹಾಸನದಿಂದ ನಿಲ್ಲಿಸಬೇಕೋ ಎಂಬ ಗೊಂದಲ ಪಕ್ಷದ ಮುಖಂಡರಲ್ಲೇ ಇತ್ತು. ಹಾಗಾಗಿ, ನಾನು ಮೈಸೂರಿಗೆ ಕೊಡಿ ಎಂದು ಕೇಳಿದ್ದೇ ಅಷ್ಟೇ. ನನ್ನ ಪಕ್ಷದಲ್ಲಿ ಅಭಿಪ್ರಾಯ ಹೇಳುವ ಸ್ವಾತಂತ್ರ್ಯವಿದೆ. ಅದಕ್ಕೆ ಹೇಳಿದೆ. ಪಕ್ಷ ತೀರ್ಮಾನ ಮಾಡಿದ ಮೇಲೆ ಮತ್ತೆ ಚರ್ಚೆ ಅಗತ್ಯವಿಲ್ಲ. ಬುಧವಾರ ರಾತ್ರಿ 11.30ರ ಸುಮಾರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿಯವರು, ನೀವು ಹಾಸನದಿಂದ ಸ್ಪರ್ಧಿಸಬೇಕು. ಕೇಂದ್ರ ಸಮಿತಿ ನಿಮಗೆ ಟಿಕೆಟ್ ನೀಡುತ್ತಿದೆ ಅಂದ್ರು, ನಾನು ಮರುಮಾತಿಲ್ಲದೇ ಒಪ್ಪಿದ್ದೇನೆ.
ಪ್ರಶ್ನೆ: ನೀವು ಬಯಸಿದ್ದು ಮೈಸೂರು, ಟಿಕೆಟ್ ನೀಡಿದ್ದು ಹಾಸನ, ಹೀಗಾದ್ರೇ ಹೇಗೆ ?
ವಿ.ಶಂ: ಯಾವುದೇ ಒಂದು ಪಕ್ಷದಲ್ಲಿ ಆಂತರಿಕ ರಾಜಕೀಯ ಇದ್ದೇ ಇರುತ್ತದೆ. ಕ್ಷೇತ್ರವಾರು ರಾಜಕೀಯಕ್ಕೆ ಅನುಗುಣವಾಗಿ, ತುಲನೆ ಮಾಡಿ, ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕಾಗುತ್ತದೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಪೊಲಿಟಿಕಲ್ ಈಕ್ವೇಷನ್ ಅಂತ ಇದ್ದೇ ಇರುತ್ತದೆ. ನಾನು ಪಕ್ಷದ ಸಿಪಾಯಿ. ಪಕ್ಷ ಅಪೇಕ್ಷೆ ಪಟ್ಟ ಕಡೆ ನಿಲ್ಲುವುದು ಕರ್ತವ್ಯ. ಅಲ್ಲದೇ, ಪಕ್ಷದ ನಿರ್ಧಾರ ಒಪ್ಪಿ ಗೌರವಿಸುವುದು ನಿಷ್ಠಾವಂತ ಕಾರ್ಯಕರ್ತನ ಸಿದ್ಧಾಂತ ಕೂಡ.
ಪ್ರಶ್ನೆ: ನೀವು ಸ್ಪರ್ಧಿಸುತ್ತಿದ್ದ ಮೈಸೂರು ಕೊಡಗು ಕ್ಷೇತ್ರದಲ್ಲಿ ಪತ್ರಕರ್ತ ಪ್ರತಾಪ್ ಸಿಂಹ ನಿಂತಿದ್ದಾರೆ... ?
ವಿ.ಶಂ: ಸಿಂಹ ಅವರನ್ನು ನಿಲ್ಲಿಸಿರುವುದು ಪಕ್ಷ. ಅದನ್ನು ಒಪ್ಪಿ, ಗೌರವಿಸಲೇಬೇಕು
ಪ್ರಶ್ನೆ: ಸಿಂಹ ಅವರ ಗೆಲವಿಗೆ ನಿಮ್ಮ ಸಹಕಾರ ಹೇಗಿರುತ್ತೆ ?
ವಿ.ಶಂ: ನೋಡಿ... ಸಿಂಹ ಪಾರ್ಟಿ ಅಭ್ಯರ್ಥಿ. ಇಲ್ಲಿ ಅಭ್ಯರ್ಥಿಕ್ಕಿಂತ ಹೆಚ್ಚಾಗಿ ಪಕ್ಷ ಮುಖ್ಯ. ಪಕ್ಷದ ನಿರ್ಧಾರವನ್ನು ಗೌರವಿಸುವುದು ಅತಿ ಮುಖ್ಯ. ಸಿಂಹ ಗೆದ್ದರೆ ಪಾರ್ಟಿ ಗೆದ್ದಂತೆ. ಪಾರ್ಟಿ ಸೋತರೆ ನಾನು ದುರ್ಬಲವಾದಂತೆ. ಸಿಂಹ ಅಭ್ಯರ್ಥಿಯಾಗಿರುವುದು ನನಗೆ ಸಂತೋಷವಾಗಿದೆ. ಯಾವುದೇ ಕಾರಣಕ್ಕೂ ಪಕ್ಷ ದುರ್ಬಲವಾಗಲು ಬಿಡಲ್ಲ. ಇದನ್ನೇ ನನಗೆ ಸಂಘ ಪರಿವಾರ ಹೇಳಿಕೊಟ್ಟಿರೋದು. ಸಿಂಹ ಅವರಿಗೆ ಗೆಲವಿಗೆ ಪೂರಕವಾದ ಎಲ್ಲಾ ರೀತಿಯ ಸಲಹೆ, ಸಹಕಾರ ನೀಡುತ್ತೇನೆ. ಅವರು ಅಲ್ಲಿ ಗೆದ್ದೇ ಗೆಲ್ಲುತ್ತಾರೆ. ಆ ಬಗ್ಗೆ ಸಂಶಯ ಬೇಡ.
ಪ್ರಶ್ನೆ: ಹಾಸನ ನಿಮಗೆ ಹೊಸತು. ಮಾಜಿ ಪ್ರಧಾನಿ ಕಣದಲ್ಲಿ ಇದ್ದಾರೆ, ಹೇಗೆ ನಿಭಾಯಿಸಿ ಗೆಲ್ಲುತ್ತೀರಿ?
ವಿ.ಶಂ: ನಿಮ್ಮ ಅನಿಸಿಕೆ ತಪ್ಪು. ಹಾಸನ ನನಗೇನೂ ಹೊಸತಲ್ಲ. ಸುಮಾರು 15- 20 ವರ್ಷಗಳಿಂದ ನಡೆದ ಚುನಾವಣೆಗಳಲ್ಲಿ ಇಲ್ಲಿಗೆ ಬಂದು ಪ್ರಚಾರ ಮಾಡಿದ್ದೇನೆ. ಇಲ್ಲಿನ ಎಲ್ಲಾ ಮುಖಂಡರು, ಕಾರ್ಯಕರ್ತರು ನನಗೆ ಪರಿಚಿತರು. ಅದಕ್ಕೂ ಮಿಗಲಾಗಿ ಆತ್ಮೀಯರು. ಹಾಸನ ನೆರೆ ಜಿಲ್ಲೆಯಷ್ಟೇ. ಬೇರೆ ರಾಜ್ಯವೇನೂ ಅಲ್ಲವಲ್ಲ... ಹಾಗಾಗಿ ನಿರಂತರವಾಗಿ ಈ ಜಿಲ್ಲೆಯ ಸಂಪರ್ಕ ಹೊಂದಿದ್ದೇನೆ. ಚುನಾವಣೆ ಪ್ರಥಮ ಇರಬಹುದು. ಜಿಲ್ಲೆ ಕಾರ್ಯಕರ್ತರು, ಮುಖಂಡರು ಹೊಸಬರಲ್ಲ. ಹಾಗಾಗಿ ಚುನಾವಣೆಯನ್ನು ಎದುರಿಸುವುದು ಕಷ್ಟಕರವಾಗದು.
ಪ್ರಶ್ನೆ: ಹಿರಿಯ ಮುಖಂಡ ಬಿ.ಬಿ. ಶಿವಪ್ಪ ಸ್ಪರ್ಧಿಸಲು ನಿರಾಕರಿಸಿದರೆ ?
ವಿ.ಶಂ: ಇಲ್ಲ. ಶಿವಪ್ಪನವರು ರಾಜಕೀಯ ಭೀಷ್ಮ. ಕರ್ನಾಟಕದಲ್ಲಿ ಬಿಜೆಪಿ ಇವತ್ತು ಈ ಮಟ್ಟಕ್ಕೆ ಬೆಳೆಯುವಲ್ಲಿ ಶಿವಪ್ಪನವರ ಕೊಡುಗೆ, ಶ್ರಮ ಅಪಾರ. ಅವರ ಮಾರ್ಗದರ್ಶನದಲ್ಲಿ ಚುನಾವಣೆ ಪ್ರಚಾರ ಮಾಡಲಾಗುವುದು. ಈಗಾಗಲೇ ಅವರನ್ನು ಭೇಟಿ ಮಾಡಿ, ಯುದ್ಧ ಎದುರಿಸುವ ಬಗ್ಗೆ ಮಾತುಕತೆ ನಡೆಸಿದ್ದೇನೆ. ನನಗೆ ತುಂಬು ಹೃದಯದಿಂದ ಸಹಾಯ ಮಾಡಲು ಪ್ರೀತಿಯಿಂದ ಒಪ್ಪಿದ್ದಾರೆ.
ದಯಾಶಂಕರ ಮೈಲಿ