ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪರಿಶಿಷ್ಟರಿಗೆ 'ಕೈ' ಕೊಟ್ಟರು

Mainashree
Updated On : 21 Mar 2014, 11:39 am

ಚನ್ನರಾಯಪಟ್ಟಣ:  ಆಡಳಿತಾರೂಢ ಕಾಂಗ್ರೆಸ್ ಪಕ್ಷ ಪರಿಶಿಷ್ಟರಿಗೆ ಸಹಾಯ ಮಾಡುವ ನೆಪದಲ್ಲಿ ಅವರಿಗೆ ಮೋಸ ಮಾಡುತ್ತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಆರೋಪಿಸಿದರು.
ಪಟ್ಟಣದಲ್ಲಿ ಪರಿಶಿಷ್ಟ ವರ್ಗ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಪರಿಶಿಷ್ಟರಿಗೆ ಶೇ. 100ರಷ್ಟು ಸಹಾಯ ಮಾಡುತ್ತಿದೆ ಎಂದು ಘೋಷಣೆ ಮಾಡಿ, ಸಹಾಯಧನ ನೀಡುವವರ ಸಂಖ್ಯೆಯನ್ನು ಕಡಿಮೆಗೊಳಿಸಿದೆ. ಇದರಿಂದಾಗಿ, ಪರಿಶಿಷ್ಟ ವರ್ಗದ ಜನತೆಗೆ ಸಿಗುವ ಸೌಲಭ್ಯ ಕಡಿಮೆಯಾಗಿರುವುದರಿಂದ ಅವರು ಆರ್ಥಿಕವಾಗಿ ಸಬಲವಾಗಲು ಸಾಧ್ಯವಿಲ್ಲ ಎಂದು ಆಪಾದಿಸಿದರು.
ಆಗ್ರಹ: ರಾಜ್ಯ ಸರ್ಕಾರ ಪರಿಶಿಷ್ಟರ ಸಾಲ ಮನ್ನಾ ಘೋಷಣೆ ಮಾಡಿದೆ. ಆದರೆ, ಅವರಿಗೆ ಪ್ರಸಕ್ತ ಸಾಲಿನಲ್ಲಿ ಸಾಲ ನೀಡುವ ಪ್ರಮಾಣವನ್ನು ಶೇಕಡಾವಾರು ಕಡಿಮೆ ಮಾಡಿದೆ. . ಸರ್ಕಾರ ಪರಿಶಿಷ್ಟರಿಗೆ ಹೆಚ್ಚಿನ ರೀತಿಯಲ್ಲಿ ಸಹಾಯ ಮಾಡುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಮಾಜಿ ಪ್ರಧಾನಿ ದೇವೇಗೌಡ ಅವರು ಪರಿಶಿಷ್ಟರಿಗೆ ಹೆಚ್ಚು ಆದ್ಯತೆ ನೀಡಿ ಅವರಿಗೆ ಮೀಸಲಾತಿಯಲ್ಲದ ಕೆಲವೆಡೆ ಅವಕಾಶ ಕಲ್ಪಿಸಿದ್ದಾರೆ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿಗಳಲ್ಲಿ ಮೀಸಲಾತಿಯಲ್ಲಿ ಅವಕಾಶ ಸಿಗಲು ದೇವೇಗೌಡ ಕಾರಣ  ಎಂದು ತಿಳಿಸಿದರು.
ಕಾರ್ಡ್ ಸ್ಥಗಿತ ಖಚಿತ: ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ 1ರು.ಗೆ ಅಕ್ಕಿ ನೀಡಲು ಸುಸ್ತಾಗಿ ಚುನಾವಣೆಯ ಫಲಿತಾಂಶ ಕಾಯುತ್ತಿದೆ. ಚುನಾವಣೆ ನಂತರ ಅದು ಸ್ಥಗಿತಗೊಳ್ಳುವುದು ಖಚಿತ ಎನಿಸುತ್ತಿದೆ. ಕಾರ್ಯಕ್ರಮ ಮುಂದುವರಿದರೆ ಕಾರ್ಡ್‌ಗಳ  ಸಂಖ್ಯೆಯಲ್ಲಿ ಬಾರಿ ಕಡಿತಗೊಳಿಸುವುದು ಖಚಿತ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನದ ಆಸೆಯಿಂದ ಕಾರ್ಯಕ್ರಮ ಮುಂದುವರಿಸುತ್ತಿದ್ದಾರೆ ಎಂದು ತಿಳಿಸಿದರು.
ಪಕ್ಷಾಂತರಿಗಳಿಗೆ ಮತ ಬೇಡ: ತಮ್ಮ ಸ್ವಾರ್ಥ ಹಾಗೂ ಅಧಿಕಾರಕ್ಕಾಗಿ ಕೆಲವರು ಪಕ್ಷವನ್ನು ಬದಲಿಸುತ್ತಿದ್ದು, ಅಂತಹ ವರ್ಗಕ್ಕೆ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಸೇರಿದ್ದು, ಅವರು ಎರಡು ಬಾರಿ ಪಕ್ಷ ಬದಲಿಸಿದ್ದಾರೆ. ಅವರಿಗೆ ಜಿಲ್ಲೆಯ ಜನತೆ ತಕ್ಕ ಪಾಠ ಕಲಿಸಲು ಸಿದ್ಧರಿದ್ದಾರೆ ಎಂದು ಬಾಲಕೃಷ್ಣ ಎಚ್ಚರಿಸಿದರು.
ಜಿಲ್ಲಾ ಸ್ಥಾಯಿ ಸಮತಿ ಅಧ್ಯಕ್ಷ ಶಿವಶಂಕರ್ ಕುಂಠೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಮಚಂದ್ರ,  ತಾಲೂಕು ಜೆಡಿಎಸ್ ಅಧ್ಯಕ್ಷ ಪರಮ ದೇವರಾಜೇಗೌಡ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಲ್. ಶ್ರೀಧರ್, ಸಾವಿತ್ರಮ್ಮ, ತಾಲೂಕು ಪಂಚಾಯಿತಿ ಸದಸ್ಯೆ ದಿವ್ಯ, ಚಲುವಯ್ಯ ಇದ್ದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪುಟ್ಟಸ್ವಾಮಿ ಸ್ವಾಗತಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement