ಲೋಕಾಬಲೆಗೆ ರೆವಿನ್ಯೂ ಇನ್ಸ್ಪೆಕ್ಟರ್
ಹೊಳೆನರಸೀಪುರ: ಜಮೀನಿನ ಖಾತೆ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ತಾಲೂಕಿನ ಕಸಬಾ ಹೋಬಳಿಯ ರೆವಿನ್ಯೂ ಇನ್ಸ್ಪೆಕ್ಟರ್ ನಾಗರಾಜು ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಸಿಕ್ಕಿ ಬಿದ್ದಿರುವ ಪ್ರಕರಣ ಶುಕ್ರವಾರ ವರದಿಯಾಗಿದೆ.
ತಮ್ಮ ಜಮೀನಿನ ಖಾತೆ ಮಾಡಿಸುವ ಸಲುವಾಗಿ ತಾಲೂಕಿನ ಹಳ್ಳಿಮೈಸೂರಿನ ವಿದ್ಯುತ್ ಕೆಲಸದ ಗುತ್ತಿಗೆದಾರ ಜಗದೀಶ್ ಎಂಬುವವರು ರೆವಿನ್ಯೂ ಇನ್ಸ್ಪೆಕ್ಟರ್ ನಾಗರಾಜು ಬಳಿ ಹೋದಾಗ, ನಾಗರಾಜು ರು. 2 ಸಾವಿರ ಲಂಚ ಕೇಳಿದ್ದು, ಮೊದಲು ರು. 1 ಸಾವಿರ ನೀಡಿದ ಜಗದೀಶ್, ನಂತರ ಉಳಿದ ರು. 1 ಸಾವಿರ ನೀಡುವುದಾಗಿ ತಿಳಿಸಿದ್ದರು.
ರೆವಿನ್ಯೂ ಇನ್ಸ್ಪೆಕ್ಟರ್ ನಾಗರಾಜು ವಿರುದ್ಧ ಜಗದೀಶ್ ಲೋಕಾಯುಕ್ತರಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ, ಲೋಕಾಯುಕ್ತ ಎಸ್ಪಿ ವೇದಮೂರ್ತಿ ಅವರ ನಿರ್ದೇಶನದಲ್ಲಿ ಲೋಕಾಯುಕ್ತ ಪಿಐ ಶಾಂತಿನಾಥ್ ಅವರ ತಂಡ ಶುಕ್ರವಾರ ಪಟ್ಟಣಕ್ಕೆ ಬಂದು, ಜಗದೀಶ್ ಅವರಿಂದ ರೆವಿನ್ಯೂ ಕಚೇರಿಯಲ್ಲಿ ಲಂಚ ಪಡೆಯುವಾಗ ವಶಕ್ಕೆ ತೆಗೆದುಕೊಂಡಿತು. ಈ ಸಂದರ್ಭದಲ್ಲಿ ಲೋಕಾಯುಕ್ತ ಕಚೇರಿಯ ಚಲುವೇಗೌಡ, ರಾಮಕೃಷ್ಣ, ರೆಹಮಾನ್, ಕುಮಾರ್, ಜಮೀಲ್ ಬೇಗ್, ಗಿರೀಶ್ ಮೊದಲಾದವರು ಇದ್ದರು.