ಶೈಕ್ಷಣಿಕ ಪ್ರಗತಿಗೆ ವೀರಶೈವ ಮಠಗಳ ಕೊಡುಗೆ ಕಾರಣ
ಅರಸೀಕೆರೆ: ಇಡೀ ರಾಷ್ಟ್ರದಲ್ಲಿ ಶಿಕ್ಷಣದಲ್ಲಿ ಕರ್ನಾಟಕ ರಾಜ್ಯ ಶಿಕ್ಷಣದಲ್ಲಿ ಪ್ರಗತಿ ಸಾಧಿಸಿದೆ ಎಂದರೆ ಅದಕ್ಕೆ ವೀರಶೈವ ಮಠಮಾನ್ಯಗಳು ಶಿಕ್ಷಣಕ್ಕೆ ನೀಡಿರುವ ಕೊಡುಗೆಯೇ ಕಾರಣ ಎಂದು ಬೆಳಗಾವಿ ಶ್ರೀ ಸಿದ್ದಸಂಸ್ಥಾನ ಮಠದ ನಿಡಸೂಸಿ ಶ್ರೀಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದ್ದಾರೆ.
ತಾಲೂಕಿನ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ನಡೆದ ಶ್ರೀ ಮಹದೇಶ್ವರ ಜಾತ್ರಾ ಮಹೋತ್ಸವ ಧಾರ್ಮಿಕ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ವೀರಶೈವ ಮಠಗಳು ಸಮಾಜದ ಚಿಂತನೆಯೊಂದಿಗೆ ಕಂತೆ ಭಿಕ್ಷೆ ಮಾಡಿ ಜಾತಿ, ಮತ, ಧರ್ಮ, ಪಂಥ, ಬೇದಗಳಿಲ್ಲದೇ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ನದಾನ, ವಿದ್ಯಾದಾನ, ಜ್ಞಾನದಾಸೋಹ ನೀಡುವ ಮೂಲಕ ಅಕ್ಷರಸ್ಥರು, ಸುಸಂಸ್ಕೃತರನ್ನಾಗಿ ಮಾಡುವ ಮೂಲಕ ನಾಡಿಗೆ ಅಪಾರ ಕೊಡುಗೆ ನೀಡಿದೆಯಲ್ಲದೆ ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲೂ ಮುನ್ನುಡಿ ಬರೆದಿದೆ ಎಂದರು.
ಜ್ಯೋತಿ ಬೆಳಗಿಸಬೇಕಿದೆ: ಜ್ಯೋತಿ ಬೆಳಗುವ ಸನಾತನ ಸಂಸ್ಕೃತಿ ಕೇಂದ್ರಗಳಾದ ಮಠಮಾನ್ಯಗಳು ಜನರಲ್ಲಿ ಅಜ್ಞಾನದ ಅಂಧಕಾರದಿಂದ ದೂರ ಮಾಡಿ ಅವರಲ್ಲಿ ಸುಜ್ಞಾನದ ಬೆಳಕಿನ ಜ್ಯೋತಿ ಬೆಳಗಿಸುವ ಕಾರ್ಯಗಳನ್ನು ಮಾಡಬೇಕಾಗಿದೆ ಎಂದರು.
ವಿಷಾದ: ಪಾಪಪುಣ್ಯ, ಧರ್ಮ- ಕರ್ಮದ ಭಯ ಭೀತಿ ಇಲ್ಲದ ಜನರಿಂದ ಸಮಾಜದಲ್ಲಿ ಅನ್ಯಾಯ, ಅತ್ಯಾಚಾರ ಅಕ್ರಮ ಚಟುವಟಿಕೆ ಪ್ರಕರಣ ಗಳು ಹೆಚ್ಚು ಬೆಳಕಿಗೆ ಬರುತ್ತಿವೆ ಎಂದು ಅವರು ವಿಷಾದಿಸಿದರು.
ಸಂತಸ: ಯಳನಡು ಜಗದ್ಗುರು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಭಾರತದ ಸಂಸ್ಕೃತಿ ಆಚಾರ ವಿಚಾರಗಳನ್ನು ಎಲ್ಲೆಡೆ ಗೌರವಿಸಲಾಗುತ್ತದೆ. ಅಂತೆಯೇ ಶ್ರೀಕೋಡಿಮಠ ಭವಿಷ್ಯವನ್ನು ಹೇಳುವ ಜೊತೆಗೆ ಸಾಮಾಜಿಕ ಧಾರ್ಮಿಕ ಮತ್ತು ಶೈಕ್ಷಣಿಕವಾಗಿ ಮುಂದಿನ ಯುವಜನಾಂಗದ ಭವಿಷ್ಯ ರೂಪಿಸುವ ಕಾರ್ಯಗಳನ್ನು ಮಾಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕರೆ: ಚಿಕ್ಕೋಡಿ ಶೀಲ ಸಂಪಾದನೆ ಮಠದ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ದೇಶ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕೆ ನಾವೇನು ಮಾಡಿದ್ದೀವಿ ಎನ್ನುವುದು ಮುಖ್ಯ. ನಮ್ಮ ಮುಂದಿನ ಪೀಳಿಗೆಯ ಉಳಿವಿಗಾಗಿ ಗಿಡ ಮರಗಳನ್ನು ಬೆಳೆಸುವತ್ತ ನಾವು ನೀವುಗಳೆಲ್ಲರೂ ಮುಂದಾಗಬೇಕೆಂದು ಕರೆ ನೀಡಿದರು.
ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಕೋಡಿಮಠದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಕೋಳಗುಂದ ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ, ಡಿ.ಎಂ. ಕುರ್ಕೆ ಬೂದಿಹಾಳ್ ಮಠದ ರಾಜಶೇಖರ ಸ್ವಾಮೀಜಿ, ಕೆ ಬಿದರೆ ದೊಡ್ಡಮಠದ ಪ್ರಭುಕುಮಾರ್ ಸ್ವಾಮೀಜಿ, ಚಿಕ್ಕಮಗಳೂರು ಕರಡಿ ಗವಿಮಠದ ಶಂಕರಾನಂದ ಸ್ವಾಮೀಜಿ, ಹೊನ್ನವಳ್ಳಿ ಕರಿಸಿದ್ದೇಶ್ವರ ಮಠದ ಶಿವಪ್ರಕಾಶ ಸ್ವಾಮೀಜಿ, ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ, ಚನ್ನರಾಯಪಟ್ಟಣದ ಕತ್ರಿಘಟ್ಟದ ಚಂದ್ರಶೇಖರ ಸ್ವಾಮೀಜಿ, ಗುಬ್ಬಿ ರೇವಣ್ಣ ಸಿದ್ದೇಶ್ವರ ಸ್ವಾಮೀಜಿ, ಸೇರಿದಂತೆ ರಾಜ್ಯದ ಅನೇಕ ಭಾಗಗಳಿಂದ ಆಗಮಿಸಿದ್ದ ಹರಗುರು ಚರಮೂರ್ತಿಗಳು ಇದ್ದರು.