'ಸಂಸತ್' ಸಹವಾಸ ಸಾಕು
ಹಾಸನ: ಈ ಲೋಕಸಭಾ ಚುನಾವಣೆಯೇ ನನ್ನ ಕೊನೆ ಚುನಾವಣೆಯಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದೇ ರಾಜ್ಯ ರಾಜಕಾರಣದಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಎಚ್. ವಿಜಯ್ ಶಂಕರ್ ಹೇಳಿದ್ದಾರೆ.
ನಗರದ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ನಡೆದ ಕಾರ್ಯಕರ್ತ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆಯೇ ನಾನು ಮೈಸೂರಿನಲ್ಲೂ ಅದನ್ನೇ ಹೇಳಿದ್ದೆ. ಸಂಸದನಾಗಿ ಆಯ್ಕೆಯಾದರೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನನ್ನ ಅವಧಿ ಮುಗಿದ ನಂತರ ವಿಧಾನಸಭಾ ಚುನಾವಣೆಗೆ ಹೆಚ್ಚು ಗಮನ ಕೊಡುತ್ತೇನೆ ಎಂದರು.
ಕಾಂಗ್ರೆಸ್ ನಾಯಕತ್ವದಲ್ಲಿ ಕೊರತೆ ಉಂಟಾಗಿ ಜನರು ಆ ಪಕ್ಷದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಇದರಿಂದ ಜನತೆ ಬಿಜೆಪಿಯತ್ತ ಒಲವು ತೋರಿದ್ದಾರೆ. 272 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಜನ ಸಿದ್ಧರಾಗಿದ್ದಾರೆ ಎಂದರು.
ಸ್ವಾಮೀಜಿ ಭಾಷಣ: ಹಳೇಬೀಡು ಶಿವಪುರ ಮಹಾಮನೆ ಮಠದ ಬಸವಾನಂದಸ್ವಾಮಿ ಮಾತನಾಡಿ, ನನಗೆ ಮಠಕ್ಕಿಂತ ದೇಶ ಮುಖ್ಯ. ದೇಶ ಸುಭಿಕ್ಷೆಯಿಂದ ಇದ್ದರೆ ಮಠಗಳು ಚೆನ್ನಾಗಿ ಇರುತ್ತವೆ. ನರೇಂದ್ರ ಮೋದಿ ಅವರ ಆದರ್ಶ ಗುಣದಿಂದ ರಾಜಕೀಯಕ್ಕೆ ಬಂದೆ ಎಂದರು.
ಇಲ್ಲಿ, ಕಾಂಗ್ರೆಸ್, ಜೆಡಿಎಸ್ ಗೆದ್ದರೆ ದೇಶಕ್ಕೇನೂ ಉಪಯೋಗವಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಮಾಜಿ ಶಾಸಕ ಬಿ.ಆರ್. ಗುರುದೇವ್ ಮಾತನಾಡಿ, ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಮಾಡಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು.
ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಉಸ್ತುವಾರಿಯಾದ ಅಶ್ವತ್ ನಾರಾಯಣ ಮಾತನಾಡಿ, ಹಾಸನದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಸಾಧ್ಯಾನೇ ಇಲ್ಲ ಎಂಬ ಭಾವನೆ ಇದೆ. ಆದರೆ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಹಾಸನದಲ್ಲಿ ಬಿಜೆಪಿಗೆ ಹೆಚ್ಚಿನ ಒಲವಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಅಮಿತ್ ಶೆಟ್ಟಿ, ಜಿಲ್ಲಾಧ್ಯಕ್ಷ ರೇಣುಕುಮಾರ್, ಮುಖಂಡರಾದ ನವಿಲೆ ಅಣ್ಣಪ್ಪ, ಕೃಷ್ಣೇಗೌಡ, ಕಡೂರಿನ ಪ್ರಕಾಶ್, ಗುರುಪ್ರಸಾದ್, ನಿರ್ರ್ವಾಣಯ್ಯ, ಪ್ರಸನ್ನ ಕುಮಾರ್, ಪ್ರಾಣೇಶ್ ಹಾಗೂ ಇತರರು ಇದ್ದರು.