ಆಪ್ ಅಭ್ಯರ್ಥಿಯಾಗಿ ಸಂತೋಷ್ ಕಣಕ್ಕೆ
ಹಾಸನ: ಆಮ್ ಆದ್ಮಿ ಪಕ್ಷದಿಂದ (ಎಎಪಿ) ಹಾಸನ ಲೋಕಸಭಾ ಕ್ಷೇತ್ರದಿಂದ ತಾನು ಸ್ಪರ್ದಿಸುತ್ತಿರುವುದಾಗಿ ಸಂತೋಷ್ ಮೋಹನ್ ಶನಿವಾರ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಆಮ್ ಆದ್ಮಿ ಪಕ್ಷವು ರಾಜ್ಯದಲ್ಲಿಯೂ ಸಹ ಚುನಾವಣೆಯಲ್ಲಿ ಸ್ಪರ್ಧೆಗೆ ಮುಂದಾಗಿದೆ. ಅದೇ ರೀತ ಹಾಸನದಲ್ಲಿ ಸ್ಪರ್ದಿಸುತ್ತಿದ್ದು, ಮಾ. 24ರಂದು ಮಧ್ಯಾಹ್ನ 2ಕ್ಕೆ ನಾಮಪತ್ರ ಸಲ್ಲಿಸಲಾಗುತ್ತದೆ ಎಂದರು.
ಮನವಿ: ವೃತ್ತಿಯಲ್ಲಿ ತಾವು ವಕೀಲವಾಗಿದ್ದು, ಜಿಲ್ಲೆಯಲ್ಲಿ ಹೊಸ ಬದಲಾವಣೆಯನ್ನು ತರಲು ಮುಂದಾಗಿದ್ದೇವೆ. ಪ್ರಸ್ತುತ ಸಮಾಜದಲ್ಲಿನ ಭ್ರಷ್ಟಾಚಾರವನ್ನು ತಡೆದರೆ ದೇಶದಲ್ಲಿ ಶೇ. 50ರಷ್ಟು ಸಮಸ್ಯೆಗಳು ಬಗೆಹರಿಯಲಿವೆ. ಆದ್ದರಿಂದ ಈ ವಿರುದ್ಧ ದೊಡ್ಡ ಕ್ರಾಂತಿ ನಡೆಸಲಾಗುತ್ತಿದೆ. ಆದ್ದರಿಂದ ಈ ಬಾರಿ ಚುನಾವಣೆಯಲ್ಲಿ ಜಿಲ್ಲೆಯ ಮತದಾರರು ಅವಕಾಶವನ್ನು ಕಲ್ಪಿಸಿಕೊಟ್ಟು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು. ಎಎಪಿ ಮುಖಂಡ ಧರ್ಮೇಂದ್ರ ಮಾತನಾಡಿ, ಜಿಲ್ಲೆಯ ಸಂಸದರು ಜಿಲ್ಲೆಗಾಗಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲದ್ದನ್ನು ಗಮನಿಸಿ, ಚುನಾವಣೆಗೆ ಇಳಿಯಲು ಆಪ್ ವತಿಯಿಂದ ಮೋಹನ್ರನ್ನು ಕಣಕ್ಕಿಳಿಸಲು ನಿರ್ಧರಿಸಲಾಯಿತು ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ದಿವ್ಯಾನ್, ಗೌರೀಶ್, ಅಕ್ಮಲ್ ಜಾವೇದ್ ಇದ್ದರು.