ಕೃಷಿ ನೀತಿ ವಿಳಂಬ, ರೈತರ ದುರ್ದೈವ
ಬೇಲೂರು: ಭಾರತಕ್ಕೆ ಸ್ವಾತಂತ್ರ್ಯ ಬಂದು 68 ವರ್ಷ ಕಳೆದರೂ ತನ್ನದೇ ಆದ ಕೃಷಿ ನೀತಿಯನ್ನು ಜಾರಿಗೆ ತರಲು ವಿಫಲವಾಗಿರುವುದು ರೈತ ಸಮುದಾಯದ ದುರ್ದೈವ ಎಂದು ಲೋಕಸಭಾ ಬಿಜೆಪಿ ಅಭ್ಯರ್ಥಿ ವಿಜಯಶಂಕರ್ ಹೇಳಿದರು. ಪಟ್ಟಣದ ಪೇಟೆ ಕನ್ನಿಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ದೇಶಕ್ಕೆ ತನ್ನದೇ ಆದ ಕೃಷಿ ನೀತಿ ರೂಪಿಸದ ಕಾರಣ, ಜಾಗತಿಕ ಮಾರುಕಟ್ಟೆಯಲ್ಲಿ ಯಾವ ಬೆಳೆಗೆ ಯಾವ ಬೆಲೆ ಇದೆ ಎಂಬುದು ರೈತರಿಗೆ ತಿಳಿಯದಾಗಿದೆ ಎಂದ ಅವರು, ಯಾವ ಸಂದರ್ಭದಲ್ಲಿ ಯಾವ ಬೆಳೆ ಬೆಳೆಯಬೇಕು. ಅದಕ್ಕೆ ಸರ್ಕಾರ ಎಷ್ಟು ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂಬುದರ ಬಗ್ಗೆ ಸಮಗ್ರವಾಗಿ ರಾಷ್ಟ್ರೀಯ ಕಾನೂನು ರೂಪಿಸಬೇಕಾಗಿದೆ ಎಂದರು.
ನಾಯಕನ ಅವಶ್ಯಕತೆಯಿದೆ: ಜಲ ನೀತಿ, ಕೈಗಾರಿಕಾ ನೀತಿ, ಯುವಶಕ್ತಿಯನ್ನು ಬಳಸಿಕೊಂಡು ದೇಶವನ್ನು ಮುನ್ನೆಡಸಬೇಕಾದ ಯುವ ನೀತಿ ರೂಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ರಾಷ್ಟ್ರೀಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ಸೂತ್ರ ಅಳವಡಿಸಿಲ್ಲ. ದೇಶದ ಹೊರಗೆ ಮತ್ತು ಒಳಗೆ ಯಾವುದೇ ಭದ್ರತೆಯಿಲ್ಲದೆ ಭಯದ ನೆರಳಲ್ಲಿ ಜನತೆ ಬದುಕಬೇಕಾಗಿದೆ. 126 ಕೋಟಿ ಜನಸಂಖ್ಯೆ ಇರುವ ಭಾರತಕ್ಕೆ ಅಕ್ಕಪಕ್ಕದ ಸಣ್ಣಪುಟ್ಟ ರಾಷ್ಟ್ರಗಳು ಬೆದರಿಕೆ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ನೀತಿಗೆಟ್ಟ, ಕುಲಗೆಟ್ಟ ರಾಜಕಾರಣದಿಂದ ದೇಶದ ಭವಿಷ್ಯ ಮಂಕಾಗಿದ್ದು ದೇಶವನ್ನು ಸರಿಯಾಗಿ ತೆಗೆದುಕೊಂಡು ಹೋಗುವ ನಾಯಕನ ಅವಶ್ಯಕತೆಯಿದೆ. ಅದಕ್ಕೆ ಗುಜರಾತ್ ಮುಖ್ಯಮಂತ್ರಿ ಮೋದಿ ಸಮರ್ಥರು ಎಂದು ತಿಳಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಬೆಣ್ಣೂರು ರೇಣುಕುಮಾರ್ ಮಾತನಾಡಿ, ಬಿಜೆಪಿಯಿಂದ ಲೋಕಸಭೆ ಚುನಾವಣೆ ಅಭ್ಯರ್ಥಿಯನ್ನಾಗಿ ನಿಷ್ಕಂಳಕ ವ್ಯಕ್ತಿಯನ್ನು ವರಿಷ್ಠರು ಕಣಕ್ಕಿಳಿಸಿದ್ದು ಜಿಲ್ಲೆಯ ಕಾರ್ಯಕರ್ತರು ಅವರನ್ನು ಸ್ವಾಗತಿಸಿದ್ದಾರೆ. ನಾವು ಪ್ರಚಾರಕ್ಕೆ ಹೋದೆಡೆಯೆಲ್ಲಾ ಬಿಜೆಪಿ ಬಗ್ಗೆ ಜನತೆ ಒಲವು ತೋರುತ್ತಿದ್ದು ಒಂದು ಬಾರಿ ಮೋದಿ ಪ್ರಧಾನಿಯಾಗಲಿ ಎಂಬುದೇ ಬಹುತೇಕರ ಒತ್ತಾಸೆಯಾಗಿದೆ ಎಂದರು.
ಮಧ್ಯಮ ವರ್ಗ ತತ್ತರಿಸುತ್ತಿದೆ: ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಮಾತನಾಡಿ, ಕಾಂಗ್ರೆಸ್ ಹಿಂದೂ ವಿರೋಧಿ ನೀತಿ ಅನಿಸರಿಸುವುದರ ಮೂಲಕ ದೇಶವನ್ನು ಒಡೆದು ಆಳುತ್ತಿದೆ. ಕೇಂದ್ರ ಸರ್ಕಾರ ಬಡವರನ್ನು ದಮನ ಮಾಡಲು ಹೊರಟಿದ್ದು ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಮಧ್ಯಮವರ್ಗ ತತ್ತರಿಸಿಹೋಗುತ್ತಿದೆ ಎಂದರು.
ಶಿವಯೋಗಿಪುರ ಬಸವ ಮಹಾಮನೆಯ ಶ್ರೀ ಬಸವಾನಂದ ಸ್ವಾಮೀಜಿ, ಮಾಜಿ ಶಾಸಕ ಗುರುದೇವ್, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ನಿವೆ ಅಣ್ಣಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಅಡಗೂರು ಆನಂದ್, ಕಾರ್ಯದರ್ಶಿ ಬೆಣ್ಣೂರು ಪೂರ್ಣೇಶ್, ಜಿಪಂ ಸದಸ್ಯಅಮಿತ್ ಶೆಟ್ಟಿ, ತಾಪಂ ಸದಸ್ಯ ಪರ್ವತಯ್ಯ, ಶೇಖರಯ್ಯ, ಮುಖಂಡ ನಾರಾಯಣಸ್ವಾಮಿ, ಮಲ್ಲಿಕಾರ್ಜುನ ಮೆಡಿಕಲ್ ರಾಜಶೇಖರ್, ಬಸವರಾಜು, ರೇಣುಕಾನಂದ ಹಾಗೂ ಇತರರು ಇದ್ದರು.