ದೇವರು ಬರುವುದು ಮಾನಸಿಕ ಅಸ್ವಸ್ಥತೆ
ಬೇಲೂರು: ಮೈಮೇಲೆ ದೇವರು, ದೆವ್ವ ಬರುವುದು ಮಾನಸಿಕ ರೋಗಿಗಳಿಗೆ ಮಾತ್ರ ಎಂದು ಖ್ಯಾತ ಸಾಹಿತಿ ಬೇಲೂರು ಕೃಷ್ಣಮೂರ್ತಿ ಅಭಿಪ್ರಾಯ ಪಟ್ಟರು.
ಪಟ್ಟಣದ ದೇವಸ್ಥಾನ ರಸ್ತೆಯಲ್ಲಿರುವ ಶ್ರೀ ಸೌಮ್ಯ ನಾಯಕಿ ಮಹಿಳಾ ಸಮಾಜದಲ್ಲಿ ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ತಾಲೂಕು ಕಲಾವಿದ ಸಂಘದಿಂದ ಏರ್ಪಡಿಸಿದ್ದ 18ನೇ ಮನೆ ಮನೆ ಸಾಹಿತ್ಯಗೋಷ್ಠಿ ಉಪನ್ಯಾಸ, ಸ್ವರಚಿತ ಕವನ ವಾಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮನಸ್ಸು ಎಂಬುದರ ಬಗ್ಗೆ ಉಪನ್ಯಾಸ ನೀಡಿದರು.
ಮನಸ್ಸನ್ನು ಸುಪ್ತ ಚೇತನದಲ್ಲಿಡುವುದೇ ಸಮ್ಮೋಹನ (ಹಿಪ್ನಾಟಿಜಂ) ಎನ್ನಲಾಗುತ್ತದೆ. ತಮ್ಮ ಮನಸ್ಸನ್ನು ತಾನೇ ಅದ್ಭುತ ಶಕ್ತಿ ಎಂದು ಬಿಂಬಿಸಿಕೊಂಡು ಕುಣಿಯುವುದು, ಮೈಮರೆತು ವರ್ತಿಸುವುದು ಇತ್ಯಾದಿ ವರ್ತನೆಗಳಿಂದ ಅಸಾಮಾನ್ಯ ಶಕ್ತಿ ತನ್ನಲ್ಲಿದೆ ಎಂದು ನಂಬಿಸಲು ಕೆಲವರು ಮುಂದಾದಾಗುತ್ತಾರೆ. ಇನ್ನೂ ಕೆಲವರು ಮಾನಸಿಕ ಖಿನ್ನತೆಯಿಂದ ಬಳಲುತ್ತಾ ಭಯ, ಹಸಿವು, ಬಾಯಾರಿಕೆ, ಆತ್ಮಹತ್ಯೆಯಂತಹ ಆಲೋಚನೆಗಳಿಂದ ನರಳುತ್ತಿರುತ್ತಾರೆ ಎಂದು ಹೇಳಿದರು.
ಒಂದು ಚಿಕಿತ್ಸೆ: ಇಂತಹ ಮಾನಸಿಕ ರೋಗಿಗಳಿಗೆ ಸಮ್ಮೋಹನ ಸ್ಥಿತಿಗೆ ಕರೆದೊಯ್ದು ಚಿಕಿತ್ಸೆ ನೀಡಲು ಹಿಪ್ನಾಟಿಜಂ ಚಿಕಿತ್ಸೆ ಸಹಕಾರಿಯಾಗಿದೆ. ಚೇತನ ಶಕ್ತಿಯನ್ನು ಅಚೇತನಗೊಳಿಸಿ ಸುಪ್ತ ಚೇತನ ಸ್ಥಿತಿಗೆ ತೆಗೆದುಕೊಂಡು ಹೋಗುವುದೇ ಹಿಪ್ನಾಟಿಜಂ ಎಂಬ ಅರ್ಥದಿಂದ ಗುರುತಿಸಲಾಗುತ್ತಿದೆ ಎಂದರು.
ಸ್ವಾಗತಾರ್ಹ: ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎ. ರಾಘವೇಂದ್ರ ಹೊಳ್ಳ ಮಾತನಾಡಿ, ಸಾಹಿತ್ಯ ಪ್ರೇಮಿಗಳು ಇತ್ತೀಚೆಗೆ ಹುಟ್ಟುಹಾಕಿದ ವೇಲಾಪುರಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅತಿಬೇಗನೇ ಹೆಮ್ಮರವಾಗಿ ಬೆಳೆಯುತ್ತಿದ್ದು ಪಟ್ಟಣದ ಜನತೆ ಸಾಹಿತ್ಯ ರಸದೌತಣವನ್ನು ನೀಡುತ್ತಿದೆ. ಸರ್ಕಾರದ ಸಹಾಯಧನವಿಲ್ಲದೆ 18 ಮನೆ ಮನೆ ಗೋಷ್ಠಿಯನ್ನು ನಡೆಸುವುದು ಸುಲಭ ಮಾತಲ್ಲ.
ಇಂದಿನ ಯುವ ಪೀಳಿಗೆ ಕಂಪ್ಯೂಟರ್ ನಡುವೆ ಸಾಹಿತ್ಯ ರಚನೆ ಮತ್ತು ಓದುವ ಅಭ್ಯಾಸ ಕಡಿಮೆಯಾಗುತ್ತಿದೆ. ಯಾವಾಗ ಒಬ್ಬ ಮನುಷ್ಯ ಸಾಹಿತ್ಯವನ್ನು ಕಡೆಗಣನೆ ಮಾಡುತ್ತಾ ಹೋರಾಡುತ್ತಾನೋ, ಆಗ ಭಾಷೆ, ಸಂಸ್ಕೃತಿಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಈ ನಿಟ್ಟಿನಲ್ಲಿ ವೇಲಾಪುರಿ ಸಾಹಿತ್ಯ ವೇದಿಕೆಯಂತಹ ಸಂಸ್ಥೆಗಳು ಕನ್ನಡಾಭಿಮಾನವನ್ನು ಬೆಳೆಸುವ ಕೆಲಸ ಮಾಡುತ್ತಿರುವುದು ಸ್ವಾಗತಾರ್ಹ ಎಂದರು.
ಕಾರ್ಯಕ್ರಮದಲ್ಲಿ ಕಲಾವಿದರ ಸಂಘದ ಅಧ್ಯಕ್ಷ ಕೆಂಚೇಗೌಡ, ಟೌನ್ ಸೊಸೈಟಿ ಕಾರ್ಯದರ್ಶಿ ನಂದಕುಮಾರ್, ಗೌರವಾಧ್ಯಕ್ಷ ಮ. ಶಿವಮೂತಿ9, ಗಂಗಾಬಿಕ, ಇಂದ್ರಮ್ಮ, ರಾಮಚಂದ್ರ ಇತರರು ಇದ್ದರು.