ಪತ್ನಿಯಿಂದ ವ್ಯಕ್ತಿ ಹತ್ಯೆ
ಹಾಸನ: ಕ್ಷುಲ್ಲಕ ಕಾರಣಕ್ಕೆ ಪತ್ನಿಯಿಂದಲೇ ಪತಿ ಹತ್ಯೆಯಾಗಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಸಾಲಗಾಮೆ ಹೋಬಳಿ ಕೆಲವತ್ತಿ ಗ್ರಾಮದ ವಾಸಿ ಸೋಮೇಶ್ (34) ಕೊಲೆಯಾದ ವ್ಯಕ್ತಿ. 12 ವರ್ಷಗಳ ಹಿಂದೆ ಹಾಸನ ತಾಲ್ಲೂಕಿನ ಸಾಲಗಾಮೆ ಹೋಬಳಿ ಕೆಲವತ್ತಿ ಗ್ರಾಮದ ಸೋಮೇಗೌಡ ರವರ ಪುತ್ರ ಸೋಮೇಶನಿಗೆ ಬೇಲೂರು ತಾಲ್ಲೂಕಿನ ಹಳೇಬೀಡು ಹೋಬಳಿ ಚೀಕನಾಯಕನಹಳ್ಳಿ ಗ್ರಾಮದ ಬೊಮ್ಮೇಗೌಡ ರವರ ಪುತ್ರಿ ಶಶಿಕಲಾಳೊಂದಿಗೆ ಮದುವೆಯಾಗಿತ್ತು. ಸಂಸಾರದಲ್ಲಿ ಹೊಂದಾಣಿಕೆಯಿಲ್ಲದೆ ಆಗಾಗ್ಗೆ ಗಲಾಟೆ-ಘರ್ಷಣೆಗಳು ನಡೆಯುತ್ತಿತ್ತು ಎನ್ನಲಾಗಿದೆ. ಶಶಿಕಲಾ ಮತ್ತು ಪತಿ ಸೋಮೇಶ್ ನಡುವೆ ಜಗಳವಾಗಿದೆ. ಆಗ, ಶಶಿಕಲಾ ತನ್ನ ಪತಿ ಸೋಮೇಶ್ನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಶಿಕಲಾಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.