ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಂಚಾರ ಸರಿಯಿಲ್ಲ... ರಸ್ತೆ ಇಲ್ಲ... ನೀರಿಲ್ಲ... ಸ್ವಚ್ಛತೆಯಿಲ್ಲ...

Rashmi Kasaragodu
Updated On : 24 Mar 2014, 12:00 pm

ಹಾಸನ ನಗರದ ಮಟನ್ ಮಾರ್ಕೆಟ್ ಮತ್ತು ಹುಣಸಿನಕೆರೆ ಬಡಾವಣೆಯ ವಾರ್ಡ್ ನಂ. 21, 22, 27 ಮತ್ತು 28ರ ವ್ಯಾಪ್ತಿಯ ರಸ್ತೆಗಳು ತೀರಾ ಹದಗೆಟ್ಟಿವೆ. ಮಟನ್ ಮಾರ್ಕೆಟ್ ಹಿಂಬದಿಯಲ್ಲಿ ಕೆಲವು  ರಸ್ತೆಗಳ ಮಧ್ಯದಲ್ಲೇ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರಕ್ಕೆ ಕಷ್ಟವಾಗಿದೆ.
ಕೊಳಕು: ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ವಸ್ತುಗಳ ಗುಡ್ಡವನ್ನೇ ನೋಡಬಹುದು. ಹುಣಸಿನಕೆರೆ ರಸ್ತೆಯಲ್ಲಿ ಮಧ್ಯದಲ್ಲಿಯೇ ಸಿಮೆಂಟ್ ಕಂಬಗಳನ್ನು ಹಾಕಿರುವುದು ಮತ್ತು ರಸ್ತೆ ಮಧ್ಯದಲ್ಲಿ  ಕಲ್ಲು-ಮಣ್ಣು ಗುಡ್ಡೆಗಳು ಇವೆ. ಹುಣಸಿನ ಕೆರೆ ಲೇಔಟ್‌ನಲ್ಲಿ ಉದ್ಯಾನವನಕ್ಕೆ ಜಾಗ ಬಿಡಲಾಗಿದೆ. ಅಲ್ಲಿ ತ್ಯಾಜ್ಯ ವಸ್ತುಗಳ ಗುಡ್ಡೆ ಮತ್ತು ಅಪಾರವಾಗಿ ಬೆಳೆದಿರುವ ಪಾರ್ಥೇನಿಯಂ ಗಿಡಗಳನ್ನು ಕಾಣಬಹುದು.
ಇಲ್ಲಿಯ ಅವ್ಯವಸ್ಥೆ ಕೀಟಾಣುಗಳ ಉತ್ಪತ್ತಿಗೆ ಪ್ರೇರಕ ನೀಡುವಂತಿವೆ. ಸಹ್ಯಾದ್ರಿ ಟಾಕೀಸ್  ಕಡೆಯಿಂದ ಅರಳೇಪೇಟಿಗೆ ಕಾಲಿಟ್ಟರೆ, ಆರಂಭದಲ್ಲಿಯೇ ಬಲಭಾಗದಲ್ಲಿರುವ ನಿವೇಶನದಲ್ಲಿ ತ್ಯಾಜ್ಯ ವಸ್ತುಗಳನ್ನು ಗುಡ್ಡೆ ಹಾಕಲಾಗಿದೆ.
ಇಷ್ಟೇ ಅಲ್ಲ. ರವೀಂದ್ರನಗರ ಬಡಾವಣೆಯಲ್ಲಿರುವ ಕೌಶಿಕ ಸಂಕೇತಿ ಹಾಸ್ಟೆಲ್ ಪಕ್ಕ ಇರುವ ನಿವೇಶನ ಮಲ, ಮೂತ್ರ ವಿಸರ್ಜನೆಗೆ ಉಪಯೋಗವಾಗುತ್ತಿದೆ. ಆ ಪ್ರದೇಶದ ಕೌನ್ಸಿಲರ್‌ಗಳು ಸ್ಪಂದಿಸುತ್ತಾರೆ ಎಂದು ಜನರು ಹೇಳಿದರೂ, ಅಲ್ಲಿ ರಸ್ತೆಯ ಸ್ಥಿತಿ, ಗತಿಗಳನ್ನು ನೋಡಿದಲ್ಲಿ ಇಷ್ಟರ ಮಟ್ಟಿನ ಕಳಪೆ ನಿರ್ವಹಣೆಯೇಕೆ ಎಂದು ಆಶ್ಚರ್ಯವಾಗುತ್ತದೆ. ಬೇಸಿಗೆಯಲ್ಲಿ ನೀರಿನ ತೊಂದರೆ ಸ್ವಲ್ಪ ತೀವ್ರ ಸ್ವರೂಪ ಪಡೆಯುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕಾಗಿದೆ.
ಟಿ ಅಕ್ಮಲ್ ಅಹಮದ್, ಪುಟ್ಟಸ್ವಾಮಯ್ಯ
ನಗರ ಸಭೆ ನಿರ್ಲಕ್ಷ್ಯ; ನೀರು ಪೋಲು
ಹಾಸನ ನಗರದಲ್ಲಿ ನೀರಿಗೆ ಹಾಹಾಕಾರ ಉಂಟಾಗಿ, ಕುಡಿಯಲು ನೀರು ಸಿಗುವುದು ಕಷ್ಟ.  ಅದರೆ ಪೋಲಾಗುವುದಕ್ಕೆ ಬೇಕಾ ದಷ್ಟು ನೀರಿದೆ.  ಹಾಸನದ ಕೆ.ಆರ್. ಪುರಂನ 8ನೇ ಅಡ್ಡ ರಸ್ತೆಯಲ್ಲಿ ಮೆಹುನ್ನೀಸ ಮಾಡಲ್ ಹೈಯರ್ ಪ್ರೈಮರಿ ಶಾಲೆ ಎದುರು ಮತ್ತು ಕುವೆಂಪು ನಗರ ಬಳಿ 6-7 ಕಡೆ ಪೈಪ್ ಒಡೆದು ನೀರು ವ್ಯರ್ಥವಾಗುತ್ತಿದೆ.  
ಅದೇ ರೀತಿ ಶಂಕರ ಮಠ ಮುಖ್ಯ ರಸ್ತೆಯಲ್ಲಿ ಶಿವ ವುಡ್ ಫರ್ನೀಚರ್ಸ್ ಅಂಗಡಿಯ ಪಕ್ಕದಲ್ಲಿ ಮಲ್ನಾಡ್ ನರ್ಸಿಂಗ್ ಹೋಂಗೆ ತಿರುಗುವ ಮುನ್ನ ಪೈಪ್ ಒಡೆದು ನೀರು ರಸ್ತೆಯಲ್ಲಿ ಹರಿದು ಹೋಗುತ್ತಿದೆ. ಇದರ ಮೇಲೂ ನಗರ ಸಭೆಯ ದೃಷ್ಟಿ ಬಿದ್ದಿಲ್ಲ. ಕೆ.ಆರ್. ಪುರಂ 8ನೇ ಅಡ್ಡ ರಸ್ತೆ ನಿವಾಸಿಗಳನ್ನು ವಿಚಾರಿಸಿದಾಗ ಪೈಪ್ ಒಡೆದಿದ್ದು ನೀರು ದಂಡವಾಗುತ್ತಿರುವುದನ್ನು ಹೇಳಿದ್ದರ ಜೊತೆಗೆ ಅಲ್ಲಿ ನಗರ ಸಭೆಯವರು ಕಸ ಕಡ್ಡಿಗಳನ್ನು ತೆಗೆದು ಹಾಕುವುದಕ್ಕೆ  ತಿಂಗಳಾ ದರೂ ಬರುತ್ತಿಲ್ಲ. ಶಂಕರ ಮಠ ರಸ್ತೆಯಲ್ಲಿರುವ ಶಾರದಾ ನರ್ಸಿಂಗ್ ಹೋಂ ಕಸಕಡ್ಡಿಗಳ ಗಲ್ಲಿಯಲ್ಲಿ ಕಸದ ರಾಶಿಯೇ ಬಿದ್ದಿದೆ.  
ಈ ದೃಶ್ಯವನ್ನು ಕೆ.ಆರ್. ಪುರಂನ ಎಷ್ಟೋ ರಸ್ತೆಯ ಪಕ್ಕಗಳಲ್ಲಿ ಕಾಣಬಹುದಾಗಿದೆ. ರಸ್ತೆಯನ್ನು ಅಗೆದು, ಹಾಗೆಯೇ ಬಿಟ್ಟು ಹೋಗಲಾಗಿದೆ. ರಸ್ತೆ ಅಗೆಯಲು ನಗರ ಸಭೆ ಇಂಥವರಿಂದ  ನಿಗದಿತ ಶುಲ್ಕ ಹಣ ವಸೂಲಿ ಮಾಡುತ್ತಿಲ್ಲ. ಲಂಚ ಕೊಟ್ಟರೆ ಕಡಿಮೆ ಹಣ ತೆಗೆದುಕೊಂಡು ರಸೀದಿ ಹಾಕುತ್ತಾರೆ. ಇಲ್ಲವಾದಲ್ಲಿ ಮನಸ್ಸಿಗೆ ಬಂದಷ್ಟು ಹಣ ತೆಗೆದುಕೊಂಡು ರಸೀತಿ ಕೊಟ್ಟು, ಕಾನೂನು ದೃಷ್ಟಿಯಲ್ಲಿ ತಾವು ಏನೂ ತಪ್ಪು ಮಾಡಿಲ್ಲವೆಂಬಂತೆ ಇರುತ್ತಾರೆ.  
ಟಿ ರಮೇಶ್ ಕುಮಾರ್, ಜೈಶಂಕರ್, ಮುತ್ತಿಗೆ ಹಿರೇಹಳ್ಳಿ ಸಂಪತ್
ಇದು ರಸ್ತೆಯಲ್ಲ, ತಿಪ್ಪೇ ರಾಶಿ
ಅರಸೀಕೆರೆ ತಾಲೂಕು, ಹಾರನಹಳ್ಳಿನ ಜನತಾ ಬಡಾವಣೆ ಹೋಗುವ ರಸ್ತೆ ಪಕ್ಕ ಕಸದ ತಿಪ್ಪೇ ರಾಶಿ ಸ್ವಾಗತಿಸುತ್ತಿದೆ. ಈ ಸ್ಥಳದಲ್ಲಿ ಪ್ರತಿ ಸೋಮವಾರ ವಾರದ ಸಂತೆ ನಡೆಯುತ್ತಿದೆ
ಇಲ್ಲಿ ಸಂಗ್ರಹವಾದ ಘನತ್ಯಾಜ ವಸ್ತುಗಳನ್ನು ಊರಿನ ಕಸಗಳನ್ನು ಇಲ್ಲೆ ತಂದು ಬಿಸಾಡಿ ಹೋಗುತ್ತಿದರೂ, ಪಂಚಾಯತಿ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕುಳಿತ್ತಿದಾರೆ.ಪಕ್ಕದಲ್ಲಿ ಸರ್ಕಾರಿ ಶಾಲೆ, ಆಸ್ಪತ್ರೆ ವಸತಿ ಗೃಹಗಳು ಇವೆ.
ಪ್ರತಿದಿನ ಶಾಲಾ ವಿದ್ಯಾರ್ಥಿಗಳು, ಈ ದುರ್ವಾಸನೆ ಕುಡಿಯುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಸ್ವಚ್ಛತೆಗೆ ನಾನಾ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರೂ ಅವು, ಬರೀ ಉದ್ಘಾಟನೆಗೆ ಮಾತ್ರ ಸೀಮಿತವಾಗುತ್ತವೆ.
ಶಾಲೆಯ ಸುತ್ತಮುತ್ತ ಉತ್ತಮ ಪರಿಸರ ವಾತಾವರಣ ಕಲ್ಪಿಸಬೇಕಾದ ಅಧಿಕಾರಿಗಳು ಜನಪ್ರತಿನಿಧಿಗಳು ತಮಗೆ ಸಂಬಂಧವಿಲ್ಲ ಎಂಬಂತೆ ಇದ್ದಾರೆ. ಈ ಹಿಂದೆ, ಗ್ರಾಮ ಪಂಚಾಯ್ತಿಯಲ್ಲಿ ಮಕ್ಕಳ ಗ್ರಾಮ ಸಭೆಯಲ್ಲಿ ಶಾಲೆ ಸುತ್ತಮುತ್ತ ಸ್ವಚ್ಛತೆ ಬೇಕು ಹಾಗೂ ಶಾಲೆ ಮುಂದೆ ವಾಹನ ನಿಲುಗಡೆ ಮಾಡಬಾರದು ಎಂದು ಕೋರಿದ್ದರು. ಆಗ, ವಿದ್ಯಾರ್ಥಿಗಳ ಮನವಿಗೆ ಅನುಗುಣವಾಗಿ ನಿರ್ಧಾರಗಳನ್ನೂ ಕೈಗೊಳ್ಳಲಾಗಿತ್ತು. ಆ ನಿರ್ಧಾರಗಳು ಇಲ್ಲಿಯವರೆಗೂ ಕಡತದಲ್ಲೇ ಇವೆ. ಅವು ಈವರೆಗೆ ಅನುಷ್ಠಾನಗೊಂಡಿಲ್ಲ. ಇದರಿಂದಾಗಿ, ಮಕ್ಕಳ ಪೋಷಕರು, ಹಾರನಹಳ್ಳಿ ಗಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಕೈಕಟ್ಟಿ ಕುಳಿತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನಾದರೂ, ಈ ಕಸದ ತಿಪ್ಪೆಯನ್ನು ಗ್ರಾಮ ಪಂಚಾಯ್ತಿ ಸ್ವಚ್ಛಗೊಳಿಸುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.
ಟಿ ಹಾರನಹಳ್ಳಿ ನಾಗೇಂದ್ರ, ಬಂಡಿ ಸಿದ್ದೇಗೌಡ ಹಾಗೂ ಇತರರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement