ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಾಲೂಕಿನ 3,135 ವಿದ್ಯಾರ್ಥಿಗಳು
ಹಾಸನ: ಮಾ.28ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಅರಕಲಗೂಡು ತಾಲೂಕಿನಲ್ಲಿ ಈ ಬಾರಿ 3,135 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ 2,835 ಮಂದಿ ಹೊಸ ವಿದ್ಯಾರ್ಥಿಗಳು ಹಾಗೂ 300 ಮಂದಿ ಮರು ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ರೇವಣ್ಣ ತಿಳಿಸಿದ್ದಾರೆ.
ಹೊಸ ವಿದ್ಯಾರ್ಥಿಗಳಲ್ಲಿ 1,443 ವಿದ್ಯಾರ್ಥಿನಿಯರಿದ್ದಾರೆ. 1,392 ಬಾಲಕರಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ 679 ವಿದ್ಯಾರ್ಥಿಗಳಿದ್ದು, ಇವರಲ್ಲಿ 335 ಮಂದಿ ಬಾಲಕಿಯರು ಹಾಗೂ 343 ಮಂದಿ ಬಾಲಕರಿದ್ದಾರೆ ಎಂದು ಹೇಳಿದ್ದಾರೆ. ತಾಲೂಕಿನಲ್ಲಿ 11 ಪರೀಕ್ಷಾ ಕೇಂದ್ರ ತೆರೆಯಲಾಗುವುದು. ಮೂರು ತಂಡಗಳು ಪ್ರಶ್ನೆಪತ್ರಿಕೆ ವಿತರಣೆ ಮಾಡಲಿವೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಬ್ಬರ ಸ್ಥಾನಿಕ ಸಂಚಾರಿ ದಳ ರಚಿಸಲಾಗಿದ್ದು, ಇವರು ಪ್ರತಿದಿನ ಬದಲಾಗುತ್ತಿರುತ್ತಾರೆ. ತಹಸೀಲ್ದಾರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಬಿಇಒ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ. ತಾಲೂಕು ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆದು ಪ್ರತಿ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲು ಸಿಬ್ಬಂದಿ ನೇಮಿಸುವಂತೆ ಕೋರಲಾಗಿದೆ ಎಂದು ತಿಳಿಸಿದ್ದಾರೆ.
'ವೈದ್ಯ ಸಲಹೆ ಪಾಲಿಸಿದರೆ ಆರೋಗ್ಯಕರ ಶಿಶು ಜನನ'
ಬೇಲೂರು: ಗ್ರಾಮೀಣ ಪ್ರದೇಶ ದಲ್ಲಿನ ಅವೈಜ್ಞಾನಿಕ ಪದ್ಧತಿಗಳಿಂದ ತಾಯಿ ಮತ್ತು ಮಗುವಿನಲ್ಲಿ ಪೌಷ್ಠಿಕಾಂಶದ ಕೊರತೆಯಾಗಿ ತಾಯಿ ಮತ್ತು ಶಿಶು ಮರಣಕ್ಕೆ ದಾರಿಯಾಗುತ್ತಿದ್ದು, ಗರ್ಭಿಣಿಯರು ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸಬೇಕು ಎಂದು ತಾಲೂಕು ಆರೋಗ್ಯ ಸಹಾಯಕ ಹಕ್ಕಿಯಣ್ಣ ಕುಮಾರ್ ತಿಳಿಸಿದರು.
ತಾಲೂಕಿನ ಹೆಬ್ಬಾಳು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ತಾಯಿ ಮತ್ತು ಶಿಶು ಮರಣ ತಡೆಗಟ್ಟುವಿಕೆ ಹಾಗೂ ಆರೋಗ್ಯ ಪಾಲನೆ ಬಗ್ಗೆ ಮಾತನಾಡಿದ ಅವರು, ಆರೋಗ್ಯವಂತ ಮಗುವಿಗೆ ಜನ್ಮ ನೀಡುತ್ತಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಬೇಸಾಯ, ಕೂಲಿ ನಡುವೆ ಗರ್ಭಿಣಿಯರು ಸರಿಯಾದ ಆಹಾರ ತೆಗೆದುಕೊಳ್ಳದೆ, ಹುಟ್ಟಿದ ಮಕ್ಕಳು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹೆರಿಗೆಯಾದ ತಾಯಿ ಸೊಪ್ಪು ,ಹಣ್ಣು ತರಕಾರಿಗಳನ್ನು ತಿನ್ನಬೇಕು ಎಂದರು. ಸರ್ಕಾರ ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ ಕಾರಣ, ಗರ್ಭಿಣಿಯಾದ ಮೂರು ತಿಂಗಳಿಗೆ ಪರೀಕ್ಷೆ ಮತ್ತು ವಿವಿಧ ಲಸಿಕೆ ಹಾಗೂ ಹೆರಿಗೆ ನಂತರ ಅವರಿಗೆ ಮಡಿಲು ಕಿಟ್, ಹೆರಿಗೆ ಭತ್ಯೆ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ. ಸಾರ್ವಜನಿಕರು ಇದರ ಉಪಯೋಗ ಮಾಡಿ ಕೊಳ್ಳಬೇಕು ಎಂದು ಮನವಿ ಮಾಡಿದರು. ಆರೋಗ್ಯ ಸಹಾಯಕಿ ರತ್ಮಮ್ಮ, ಗ್ರಂಥಪಾಲಕ ಮಂಜೇಗೌಡ ಮಾತನಾಡಿದರು.