ಜೆಡಿಎಸ್ನಿಂದ ವೀರಶೈವರಿಗೇ ಆದ್ಯತೆ: ರೇವಣ್ಣ
ಕನ್ನಡಪ್ರಭ ವಾರ್ತೆ ಹಾಸನ ಮಾ.24
ವೀರಶೈವರಿಗೆ ಜೆಡಿಎಸ್ ಹೆಚ್ಚಿನ ಆದ್ಯತೆ ನೀಡಿದೆ. ಜಿಲ್ಲೆಯ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ವೀರಶೈವ ಜನಾಂಗಕ್ಕೆ ಸೇರಿದ ವ್ಯಕ್ತಿಗೆ ಟಿಕೆಟ್ ನೀಡಲಾಗಿತ್ತು. ಆದರೆ ಪ್ರಚಾರಕ್ಕೆ ವೇಳೆ ಸಿಗದ ಕಾರಣ ಅವರು ಅಲ್ಪಮತಗಳಿಂದ ಸೋತರು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ.
ನಗರದ ಅರಳೇಪೇಟೆಯ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ಸೋಮವಾರ ಜೆಡಿಎಸ್ನಿಂದ ಹಮ್ಮಿಕೊಂಡಿದ್ದ ವೀರಶೈವರ ಸಮಾವೇಶದಲ್ಲಿ ಮಾತನಾಡಿ, ರೇವಣ್ಣವರು, ಜೆಡಿಎಸ್ ಜಿಲ್ಲಾಧ್ಯಕ್ಷ ಜಾವಗಲ್ ರಾಜಶೇಖರ್ ಕೂಡ ವೀರಶೈವರೇ. ಸಕಲೇಶಪುರದ ಗುರುದೇವ್ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲಾಗಿದೆ. ಇದನ್ನು ತಿಳಿಯದೇ ಕಾಂಗ್ರೆಸ್ ಮತ್ತು ಬಿಜೆಪಿಯವರು ಓಟಿಗಾಗಿ ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ನಿಂದ ಅನ್ಯಾಯ: ಹಿರಿಯ ಮುತ್ಸದಿ ದಿವಂಗತ ವೀರೇಂದ್ರ ಪಾಟೀಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಿದ್ದು ಯಾರು ಎಂಬುದಕ್ಕೆ ಕಾಂಗ್ರೆಸ್ನವರು ಉತ್ತರಿಸಬೇಕು. ಆಸ್ಪತ್ರೆಯಲ್ಲಿ ವೀರೇಂದ್ರ ಪಾಟೀಲರು ಇದ್ದಾಗ ವಿಮಾನ ನಿಲ್ದಾಣದಿಂದಲೇ ರಾಜೀವ್ ಗಾಂಧಿ ಅವರು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಿ ಅಮಾನವೀಯತೆ ತೋರಿದರು. ಹೀಗೆ ಕಾಂಗ್ರೆಸ್ ವೀರಶೈವ ಜನಾಂಗಕ್ಕೆ ತೀವ್ರ ಅನ್ಯಾಯ ಎಸಗಿದೆ ಇದನ್ನು ಅರಿಯಬೇಕಾಗಿದೆ ಎಂದು ಹೇಳಿದರು. ಹಳ್ಳಿಮೈಸೂರಿನಲ್ಲಿ ಒಕ್ಕಲಿಗರು ಹೆಚ್ಚಿಲ್ಲ. ಅಲ್ಲಿಗೆ ಕುಡಿಯುವ ನೀರು ಒದಗಿಸಲಾಯಿತು. ಆದರೆ ಕಾಂಗ್ರೆಸ್ ಕುಡಿಯುವ ನೀರಿಗೆ ರಾಜಕೀಯ ಮಾಡಿದೆ. ಮಾಜಿ ಪ್ರಧಾನಿ ಇರುವ ಜಿಲ್ಲೆ ಎಂದು ಅವರಿಗೆ ಕೆಟ್ಟ ಹೆಸರು ತರುವ ದೃಷ್ಟಿಯಲ್ಲಿ ಜಿಲ್ಲೆ ಒಳಗೆ ಕುಡಿಯುವ ನೀರಿಗೂ ರಾಜಕೀಯವನ್ನು ಕಾಂಗ್ರೆಸ್ನಿಂದ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಮೂರು ಬಾರಿ ವಿದ್ಯುತ್ ದರ ಏರಿಸಲಾಗಿದೆ. ನೀಡುತ್ತಿರುವ ಒಂದು ಕೆಜಿ ಅಕ್ಕಿ ಬೆಲೆ 1 ರು. ಚುನಾವಣೆ ಮುಗಿದ ಮರು ದಿನವೇ ಸ್ಥಗಿತಗೊಳಿಸಲಾಗುತ್ತದೆ. ಜೆಡಿಎಸ್ ಕಾಲಾವಧಿಯಲ್ಲಿ ಎಲ್ಲಾ ಸಮಾಜಕ್ಕೂ ಸಮಾನ ಅವಕಾಶ ನೀಡಿದೆ. ಜಿಲ್ಲೆಯಲ್ಲಿ ಜೆಡಿಎಸ್ ಶಾಸಕರು ಹೆಚ್ಚು ಇರುವುದರಿಂದ ಕಾಂಗ್ರೆಸ್ ಪಕ್ಷದವರಿಗೆ ಉದಾಸೀನ ಭಾವನೆ ಬಂದಿದೆ ಎಂದು ದೂರಿದರು. ಬೇಲೂರಿನಲ್ಲಿ ಜೆಡಿಎಸ್ ಆಡಳಿತದಲ್ಲಿ ಒಂದು ವರ್ಷದೊಳಗೆ ಸೇತುವೆ ನಿರ್ಮಿಸಿಕೊಡಲಾಯಿತು. ಜಿಲ್ಲೆಯು ಇಷ್ಟೊಂದು ಪ್ರಗತಿ ಆಗಬೇಕಾದರೇ ಮಾಜಿ ಪ್ರಧಾನಿಯವರೇ ಕಾರಣ. ನಾವು ಕೊಟ್ಟ ಮಾತು ತಪ್ಪುವುದಿಲ್ಲ ಎಂದು ತಪ್ಪಿಯೂ ಇಲ್ಲ ಎಂದು ನೆರೆದಿದ್ದ ಜನತೆಗೆ ತಿಳಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಜಾವಗಲ್ ರಾಜಶೇಖರ್, ನಗರಸಭೆ ಅಧ್ಯಕ್ಷೆ ಶ್ರೀ ವಿದ್ಯೆ, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಶಾಸಕರಾದ ಎಚ್.ಕೆ. ಕುಮಾರಸ್ವಾಮಿ, ಎಚ್.ಎಸ್. ಪ್ರಕಾಶ್, ಸಿ.ಎನ್. ಬಾಲಕೃಷ್ಣ, ಕೆ.ಎಂ. ಶಿವಲಿಂಗೇಗೌಡ, ಮಾಜಿ ಶಾಸಕರಾದ ಎ.ಟಿ. ರಾಮಸ್ವಾಮಿ, ಬಿ.ವಿ. ಕರಿಗೌಡ, ಕಾರ್ಯಾಧ್ಯಕ್ಷ ಚನ್ನವೀರಪ್ಪ, ಕೆ.ಎಸ್. ಲಿಂಗೇಶ್, ಕೆ.ಎಂ. ರಾಜೇಗೌಡ, ಸಿದ್ದರಾಮಶೆಟ್ಟರು, ಹೊಳೆನರಸೀಪುರದ ಬಸವರಾಜು, ತೋ.ಚ. ಅನಂತ ಸುಬ್ಬರಾಯ ಹಾಗೂ ವೀರಶೈವ ಜನಾಂಗದ ಮುಖಂಡರಾದ ಸಂಗಂ, ನಟರಾಜ್, ಬ್ಯಾಡರಹಳ್ಳಿ ಬಸವರಾಜು, ಎಪಿಎಂಸಿ ಸದಸ್ಯ ಕುಮಾರ್, ದಿಲೀಪ್ ಇತರರು ಇದ್ದರು.
ಬೇಲೂರಿನಲ್ಲಿ ಜೆಡಿಎಸ್ ಆಡಳಿತದಲ್ಲಿ ಒಂದು ವರ್ಷದೊಳಗೆ ಸೇತುವೆ ನಿರ್ಮಿಸಿಕೊಡಲಾಯಿತು. ಜಿಲ್ಲೆಯು ಇಷ್ಟೊಂದು ಪ್ರಗತಿ ಆಗಬೇಕಾದರೇ ಮಾಜಿ ಪ್ರಧಾನಿಯವರೇ ಕಾರಣ.
ಟಿ ಎಚ್.ಡಿ. ರೇವಣ್ಣ