ಮತದಾನ ಮಹತ್ವ ಜಾಗೃತಿ ಜಾಥಾ
ಹೊಳೆನರಸೀಪುರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸೋಮವಾರ ಪಟ್ಟಣದ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಸರ್ವರ ಪಾಲ್ಗೊಳ್ಳುವಿಕೆ ಎಂಬ ಘೋಷಣೆಯೊಂದಿಗೆ ಮೆರವಣಿಗೆ ನಡೆಸಲಾಯಿತು.
ತಾಲೂಕಿನ ನಾನಾ ಅಧಿಕಾರಿ ವರ್ಗದವರು ಈ ಸಂದರ್ಭದಲ್ಲಿ ಅರಿವು ಜಾಥಾದೊಂದಿಗೆ ಪಾಲ್ಗೊಂಡಿದ್ದರು.
ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮತದಾನದ ಅರಿವು ಮೂಡಿಸುವ ಜಾಥಾ ಪಟ್ಟಣದ ಹಾಸನ ಮೈಸೂರು ರಸ್ತೆಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಳಿಯ ಹೇಮಾವತಿ ವೃತ್ತದಿಂದ ಮತದಾನದ ಮಹತ್ವದ ಬಗ್ಗೆ ಘೋಷಣೆಗಳನ್ನು ಕೂಗಿದರು. ನಂತರ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಮತದಾನದ ಕುರಿತಂತೆ ಅರಿವು ಮೂಡಿಸಿದರು.