ವಿದ್ಯಾರ್ಥಿನಿಯರಿಂದ ಪರಂಪರಾ ಜಾಥಾ
ಕ.ಪ್ರ. ವಾರ್ತೆ, ಹಾಸನ, ಮಾ.24
ಹಾಸನದ ಎ.ವಿ. ಕಾಂತಮ್ಮ ಮಹಿಳಾ ಕಾಲೇಜಿನ ಪರಂಪರಾ ಕೂಟದ ವತಿಯಿಂದ ಚಿಕ್ಕಮಗಳೂರು ಜಿಲ್ಲೆ ಮತ್ತು ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಪರಂಪರಾ ಜಾಥಾವನ್ನು ಏರ್ಪಡಿಸಿ ಕರಪತ್ರಿಕೆಗಳನ್ನು ಹಂಚಿ ಮತ್ತು ಬಿತ್ತಿಪತ್ರಗಳನ್ನು ಹಿಡಿದು ಜಾಥಾ ಏರ್ಪಡಿಸಲಾಗಿತ್ತು.
ಜಾಥಾದಲ್ಲಿ ಕಾಲೇಜಿನ ಸುಮಾರು 90 ವಿದ್ಯಾರ್ಥಿನಿಯರು ಮತ್ತು ಸಂಚಾಲಕ ಡಾ.ಡಿ. ಜಯದೇವೇಗೌಡ, ಉಪನ್ಯಾಸಕ ಎಚ್.ಡಿ. ನಿಂಗಯ್ಯ ಮತ್ತು ಎಚ್.ಎನ್. ಕುಮಾರಸ್ವಾಮಿ ಭಾಗವಹಿಸಿದ್ದರು. ಜಾಥಾದ ಉದ್ಘಾಟನಾ ಕಾರ್ಯಕ್ರಮವನ್ನು ಗ್ರಾಮದ ಮುಖ್ಯಸ್ಥ ಹಾಗೂ ದೇವಾಲಯಗಳ ಉಸ್ತುವಾರಿದಾರ ಬೀರೇಗೌಡ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಸಿದ್ದೇಶ್, ಪ್ರಕಾಶ್ಕುಮಾರ್ ಇತರರು ಪಾಲ್ಗೊಂಡಿದ್ದರು.
ಜಾಥಾದಲ್ಲಿ ಪ್ರಾಂಶುಪಾಲೆ ಡಾ.ಜೆ. ಶೈಲಜಕುಮಾರಿ ಮಾತನಾಡಿ, ಐತಿಹಾಸಿಕ ತಾಣಗಳು ಮತ್ತು ಪಾರಂಪರಿಕ ತಾಣಗಳು ಬಹಳ ಮಹತ್ವಪೂರ್ಣವಾಗಿದ್ದು ಇವುಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ಇಂದಿನ ಎಲ್ಲಾ ಜನರ ಮೇಲಿದೆ. ಆದ್ದರಿಂದ ಈ ಅಮೂಲ್ಯ ಸ್ಮಾರಕಗಳನ್ನು ಹಾಳು ಮಾಡದಂತೆ ಎಲ್ಲರೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.
ನಂತರ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ವಿದ್ಯಾರ್ಥಿನಿಯರು ಸ್ಮಾರಕಗಳ ರಕ್ಷಣೆಯ ಬಗ್ಗೆ ಘೋಷಣೆಗಳನ್ನು ಕೂಗಿದಲ್ಲದೇ ಎಲ್ಲಾ ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚಿ ಸ್ಮಾರಕಗಳ ಬಗ್ಗೆ ಮಾಹಿತಿ ನೀಡಿ, ಅವುಗಳ ಮೇಲೆ ಏನನ್ನು ಬರೆಯದಂತೆ, ವಿರೂಪಗೊಳಿಸದಂತೆ ಮತ್ತು ಸ್ವಂತ ಕಾರ್ಯಕ್ಕೆ ಬಳಸಿಕೊಳ್ಳದಂತೆ ತಿಳಿಸಿದರು.
ನಂತರ ಇಲ್ಲಿನ ವೀರ ನರಸಿಂಹ ದೇವಾಲಯವನ್ನು ವೀಕ್ಷಿಸಿದ ವಿದ್ಯಾರ್ಥಿನಿಯರು ದೇವಾಲಯದ ಬಗ್ಗೆ ಗ್ರಾಮದ ಶ್ರೀ ಪ್ರಕಾಶ್ಕುಮಾರ್ರಿಂದ ಮಾಹಿತಿ ಪಡೆದರು. ಇಲ್ಲಿನ ವೀರ ನರಸಿಂಹ ವಿಗ್ರಹದ ಮೇಲೆ ಪ್ರತಿವರ್ಷ ಮಾ.23ರಂದು 7 ಬಾಗಿಲುಗಳನ್ನು ದಾಟಿದ ಸೂರ್ಯನ ಕಿರಣ ಈ ವಿಗ್ರಹದ ಮೇಲೆ ಬೀಳುತ್ತದೆ. ಪ್ರತಿ ವರ್ಷ ಜಾತ್ರೆಯು ಏರ್ಪಡುತ್ತದೆ.
ಅದೇ ರೀತಿ ಇಲ್ಲಿರುವ ಉದ್ಬವ ಗಣಪತಿ ವಿಗ್ರಹವೂ ವಿಶೇಷವಾಗಿದ್ದು ಇದು ನೈಸರ್ಗಿಕವಾಗಿ ನಿರ್ಮಿತಗೊಂಡಿದೆ. ಬೆಳವಾಡಿ ಇಷ್ಟೆಲ್ಲಾ ಕಲಾ ಶ್ರೇಷ್ಠ ದೇವಾಲಯ ಹೊಂದಿದ್ದರೂ ಜನಪ್ರಿಯತೆ ಗಳಿಸದೇ ಇರುವುದರ ಬಗ್ಗೆ ಗ್ರಾಮಸ್ಥರಲ್ಲಿ ಅಸಮಾಧಾನವಿದೆ.
ಕಾರ್ಯಕ್ರಮ ಮುಕ್ತಾಯವಾದ ನಂತರ ಜಾವಗಲ್ನ ಲಕ್ಷ್ಮಿನರಸಿಂಹ ದೇವಾಲಯಕ್ಕೆ ತಂಡ ಭೇಟಿ ನೀಡಿ ಇಲ್ಲಿ ವಿದ್ಯಾರ್ಥಿನಿಯರು ವೀಕ್ಷಿಸಿದ್ದಲ್ಲದೇ ಜಾಥಾ ನೆಡೆಸಿ ಸ್ಮಾರಕಗಳ ರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ನಂತರ ಹೊಯ್ಸಳರ ರಾಜಧಾನಿ ಹಳೇಬೀಡು ಹಾಗೂ ಪುಷ್ಪಗಿರಿ ಬೆಟ್ಟಗಳಿಗೂ ತಂಡ ಭೇಟಿ ನೀಡಿ ಜಾಗೃತಿ ಕಾರ್ಯಕ್ರಮ ನಡೆಸಿದ ನಂತರ ಸ್ವಸ್ಥಳಕ್ಕೆ ಹಿಂದಿರುಗಿತು.