ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಷರೀಫ್ ಜೆಡಿಎಸ್ ಸೇರದಿದ್ದರೆ ನಷ್ಟವಿಲ್ಲ

Rashmi Kasaragodu
Updated On : 24 Mar 2014, 11:48 am

ಮಂಡ್ಯ: ಮಾಜಿ ಸಚಿವ ಜಾಫರ್ ಷರೀಫ್ ಜೆಡಿಎಸ್ ಸೇರದಿರುವುದರಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ಅವರು ಅಲ್ಲಿಯೇ ಇರಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಖಾರವಾಗಿ ಹೇಳಿದರು.
ಜೆಡಿಎಸ್‌ಗೆ ಬರುವಂತೆ ಜಾಫರ್ ಷರೀಫ್ ಅವರನ್ನು ನಾವೇನು ಆಹ್ವಾನಿಸಿರಲಿಲ್ಲ. ಕಾಂಗ್ರೆಸ್‌ನಲ್ಲಿ ಟಿಕೆಟ್
ಸಿಗಲಿಲ್ಲವೆಂಬ ಕಾರಣಕ್ಕೆ ಅವರೇ ಜೆಡಿಎಸ್ ಕಡೆಗೆ ಬರುವ ಇಂಗಿತ ವ್ಯಕ್ತ ಪಡಿಸಿದ್ದರು ಎಂದರು.
ಮೈಸೂರಿನಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿ ಬಿ- ಫಾರಂನ್ನೂ ಜಾಫರ್ ಮೆಕ್ಕಾಕ್ಕೆ ತೆಗೆದುಕೊಂಡು ಹೋಗಿದ್ದರು. ಅಲ್ಲೇ ಪೂಜೆ ಮಾಡಿಸಿಕೊಂಡು ಬಂದು ಮೈಸೂರಿನಲ್ಲಿ ನಾಮಪತ್ರ ಸಲ್ಲಿಸುವುದಾಗಿ ನಮ್ಮ ಬಳಿ ಹೇಳಿದ್ದರು. ಈಗ ಜೆಡಿಎಸ್‌ಗೆ ಬರುವುದಿಲ್ಲ ಎಂದು ಅಲ್ಲೇ ಉಳಿದಿದ್ದಾರೆ. ಇದರಿಂದ ನಮಗೇನೂ ನಷ್ಟವಿಲ್ಲ ಎಂದರು.
ಕಾಂಗ್ರೆಸ್‌ನವರು ಷರೀಫ್ ಅವರನ್ನು ಅಲ್ಲೇ ಉಳಿಸಿಕೊಳ್ಳಲಿ. ಅವರಿಗೆ ಯಾವ ಸ್ಥಾನ ಮಾನಗಳನ್ನು ಕೊಟ್ಟು ಗೌರವದಿಂದ ನಡೆಸಿಕೊಳ್ಳುವರೋ ನಾವೂ ನೋಡ್ತೇವೆ. ಮುಸ್ಲಿಂರು ಗಮನಿಸಬೇಕು. ನಮ್ಮ ಬಳಿ ಅಭ್ಯರ್ಥಿಗಳಿಲ್ಲವೆಂದು ನಾವು ಷರೀಫ್ ಅವರಿಗೆ ಟಿಕೆಟ್ ಕೊಡಲು ಮುಂದಾಗಿರಲಿಲ್ಲ. ನಮ್ಮಲ್ಲೂ ಸಮರ್ಥರಿದ್ದಾರೆ. ಅವರನ್ನು ಕಣಕ್ಕಿಳಿಸಿ ಹೋರಾಟ ನಡೆಸುತ್ತೇವೆ ಎಂದು ನುಡಿದರು.
ಗದ್ಗದಿತರಾದ ಎಚ್‌ಡಿಕೆ
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಪರ ಚುನಾವಣಾ ಪ್ರಚಾರ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗದ್ಗದಿತರಾಗಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು.
ಅಭ್ಯರ್ಥಿ ಪುಟ್ಟರಾಜು ನಾಮಪತ್ರ ಸಲ್ಲಿಸಿ ಹೊರ ಬಂದ ನಂತರ ತೆರೆದ ವಾಹನದಲ್ಲಿ ಪ್ರಚಾರ ಭಾಷಣ ಮಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳನ್ನು ತರಾಟೆ ತೆಗೆದುಕೊಂಡ ನಂತರ ಕಾರ್ಯಕರ್ತರು ಪಕ್ಷದ ಮೇಲಿಟ್ಟಿರುವ ಅಭಿಮಾನವನ್ನು ನೆನೆದು ಕಣ್ಣೀರಿಟ್ಟರು.
ಕಾಂಗ್ರೆಸ್ ಹಾಗೂ ಬಿಜೆಪಿ ಪಾಪದ ಹಣ ಗಳಿಕೆ ಮಾಡಿವೆ. ಆ ಹಣದಿಂದಲೇ ಚುನಾವಣೆಗಳನ್ನು ಎದುರಿಸುತ್ತವೆ. ಆದರೆ, ಜೆಡಿಎಸ್ ಪಕ್ಷದಲ್ಲಿ ಆರ್ಥಿಕ ಶಕ್ತಿ ಇಲ್ಲ. ಎರಡೂ ಪಕ್ಷಗಳಿಗೂ ಪ್ರಬಲ ಪೈಪೋಟಿ ನೀಡಲು ಸಾಲಸೋಲ ಮಾಡುತ್ತಿದ್ದೇವೆ. ಮುಂದೇನಾದರು ಹೆಚ್ಚು ಕಡಿಮೆಯಾದರೆ ನಮ್ಮ ಕುಟುಂಬಗಳು ಅನಾಥವಾಗುತ್ತವೆ ಎಂದು ಗದ್ಗದಿತರಾದರು.
ಈವರೆಗಿನ ಎಲ್ಲಾ ಚುನಾವಣೆಗಳಲ್ಲಿ ಜೆಡಿಎಸ್ ಜನ ಬಲದ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಿಕೊಂಡು ಬಂದಿದೆ. ಹಣ ಬಲಕ್ಕೆ ಮಾರುಹೋಗದ ಕಾರ್ಯಕರ್ತರು ಜೆಡಿಎಸ್ ಮೇಲಿಟ್ಟಿರುವ ಅಭಿಮಾನಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದು ಕುಮಾರಸ್ವಾಮಿ ಕಣ್ಣೀರಿಟ್ಟರು.
ಕಾಂಗ್ರೆಸ್ - ಬಿಜೆಪಿಯ ಹಣಬಲದ ಎದುರು ನಾವು ಕುಂದಿದ್ದೇವೆ. ಇಳಿವಯಸ್ಸಿನಲ್ಲಿಯೂ ದೇವೇಗೌಡ ಅವರಿಗೆ ಏಕೆ ಬೇಕು ರಾಜಕಾರಣ. ನಾನೇಕೆ ರಾಜಕಾರಣದಲ್ಲಿ ಇರಬೇಕು ಎಂಬ ಪ್ರಶ್ನೆ ಕಾಡುತ್ತಿರುತ್ತದೆ. ಜನರು ಪಕ್ಷದ ಮೇಲಿಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಸೋತಿರುವ ನಾವು ಬದುಕಿದಷ್ಟು ದಿನವೂ ರಾಜಕಾರಣದಲ್ಲಿರುತ್ತೇವೆ ಎಂದು ಹೇಳಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement