ಸಮರ್ಪಕ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ
ಬೇಲೂರು: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ದಿನಗೂಲಿ ನೌಕರರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲವೆಂದು ಮಹಿಳಾ ನೌಕರರು ಸೋಮವಾರ ಕೆಲಸ ನಿರ್ವಹಿಸದೆ ಪ್ರತಿಭಟನೆ ನಡೆಸಿದರು.
ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ 10 ಮಂದಿ ದಿನಗೂಲಿ ಮಹಿಳಾ ನೌಕರರನ್ನು ಕೀಳಾಗಿ ಕಾಣಲಾಗುತ್ತಿದೆ ಎಂದು ಆರೋಪಿಸಿ ದಿನಗೂಲಿ ಮಹಿಳೆಯರು ತಮ್ಮ ಕೆಲಸವನ್ನು ನಿರ್ವಹಿಸಿದೆ ಪ್ರತಿಭಟನೆ ನಡೆಸಿದರು.
ಹಿರಿಯ ದಿನಗೂಲಿ ನೌಕರರಾದ ರಂಗಮ್ಮ, ನಾಗರತ್ನ ಮಾತನಾಡಿ, ನಾವು ಕಳೆದ 17 ವರ್ಷದಿಂದ ದಿನಗೂಲಿ ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಆರಂಭದಲ್ಲಿ ನಮಗೆ 500 ರು. ಸಂಬಳ ಸಿಗುತ್ತಿದ್ದು ಈಗ 3 ಸಾವಿರ ರು. ಸಿಗುತ್ತಿದೆ. ಆದರೆ ಅದನ್ನೂ ಐದಾರು ತಿಂಗಳಿಂದ ಸರಿಯಾಗಿ ನೀಡದ ಕಾರಣ ಕುಟುಂಬ ನಿರ್ವಹಣೆ ಕಷ್ಟವಾಗದೆ ಎಂದರು.
ಬೆಳಿಗ್ಗೆ 7 ಗಂಟೆಗೆ ಬಂದರೆ ಸಂಜೆ 5 ಗಂಟೆ ವರೆಗೆ ದುಡಿಯಬೇಕು. ಈಗ ಮತ್ತೆ ರಾತ್ರಿ ಪಾಳೆಯದಲ್ಲಿ ಕೆಲಸ ಮಾಡುವಂತೆ ಗುತ್ತಿಗೆದಾರರು ಒತ್ತಡ ಹೇರುತ್ತಿದ್ದು ದೂರದ ಗ್ರಾಮದಲ್ಲಿ ಇರುವ ನಾವು ಸರಿರಾತ್ರಿ ವರೆಗೆ ಕೆಲಸ ಮಾಡಿ ನಂತರ ಮನೆಗೆ ಹಿಂತಿರುಗುವುದು ಹೇಗೆ ಎಂದು ಪ್ರಶ್ನಿಸಿದರು.
ತಮಗೆ ಕಳೆದ ಐದು ತಿಂಗಳಿಂದ ಸರಿಯಾಗಿ ವೇತನವನ್ನು ಕೊಡುತ್ತಿಲ್ಲ, ರಸೀದಿಯಲ್ಲಿ 4,769 ರು. ಗೆ ಸಹಿ ಹಾಕಿಸಿ ನಮೂದಿಸಿ ಪಿಎಫ್ಗೆ 1300 ಮತ್ತು ಇತರೆ ಖರ್ಚು ಎಂದು 400 ರು. ತೆಗೆದು 3 ಸಾವಿರ ಕೊಡುತ್ತಾರೆ. ಕಳೆದ 1 ವರ್ಷದಿಂದ ಪಿಎಫ್ ಹಣವನ್ನು ಕಟ್ಟಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ರಸೀದಿಯನ್ನಾಗಲಿ ಅಥವ ನಾವು ಕಟ್ಟಿದ ಹಣಕ್ಕೆ ಸಾಕ್ಷಿಯಾಗಲಿ ಯಾವುದೂ ಇಲ್ಲವಾಗಿದೆ. ಈ ಬಗ್ಗೆ ಏನಾದರೂ ಕೇಳಲು ಹೋದರೆ ನಮ್ಮನ್ನು ಅವಾಚ್ಯ ಶಬ್ಧದಿಂದ ನಿಂದಿಸಿ ಕೆಲಸದಿಂದ ತೆಗೆದು ಹಾಕುವ ಬೆದರಿಕೆ ಹಾಕುತ್ತಾರೆ. ತಮಗೆ ಸಮಯಕ್ಕೆ ಸರಿಯಾಗಿ ವೇತನ ಹಾಗೂ ಗೌರವದಿಂದ ಕಾಣಬೇಕು ಎಂದು ಒತ್ತಾಯಿಸಿದರು. ಗುತ್ತಿಗೆದಾರ ರಾಮಣ್ಣ ಮಾತನಾಡಿದರು. ತುಳಸಮ್ಮ, ಸುಧಾ, ಸುಬ್ಬಲಕ್ಷ್ಮಿ ಇತರರು ಇದ್ದರು.