ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹಿಂದುತ್ವ ವಿರೋಧಿಗಳೇ ಕೋಮುವಾದಿಗಳು

Rashmi Kasaragodu
Updated On : 24 Mar 2014, 11:46 am

ಕ.ಪ್ರ. ವಾರ್ತೆ    ಅರಸೀಕೆರೆ    ಮಾ.24
ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ, ಪ್ರತಿಪಾದಿಸುವ ಹಿಂದುತ್ವ ವಾದಿಗಳನ್ನು ಕೋಮುವಾದಿಗಳು ಎಂದು ಕರೆಯವ ಜನರೇ ಪಕ್ಕಾ ಕೋಮುವಾದಿಗಳು ಎಂಬುದನ್ನು ಜನತೆ ಮರೆಯಬಾರದು. ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ತಕ್ಕ ಉತ್ತರ ನೀಡಬೇಕೆಂದು ಮಾಜಿ ಲೋಕಸಭಾ ಸದಸ್ಯೆ ತೇಜಸ್ವಿನಿಗೌಡ ಕರೆ ನೀಡಿದ್ದಾರೆ.
ಪಟ್ಟಣದ ಶ್ರೀಬಸವರಾಜೇಂದ್ರ ಸಮುದಾಯ ಭವನದಲ್ಲಿ ಸೋಮವಾರ ತಾಲೂಕು ಬಿಜೆಪಿ ಘಟಕ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಭಾರತ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ದ ಮುಸ್ಲಿಂ ಲಿಂಗ್ ಮತ್ತು ಹಿಂದೂ ಮಹಾಸಭಾ ಸಂಘಟನೆಗಳು ದೇಶದ ವಿಭಜನೆ ಒತ್ತಾಯಿಸಿ ಪಾಕಿಸ್ತಾನದ ಪರವಾಗಿದ್ದ ಮುಸ್ಲಿಂ ಲೀಗ್ ವಿರುದ್ಧ ಕಾಂಗ್ರೆಸ್ ಪರ ಮತದಾನ ಮಾಡುವ ಮೂಲಕ ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಆಗಲು ಸಹಕಾರ ನೀಡಿದ್ದು ಅಂದಿನ ಹಿಂದೂ ಮಹಾಸಭಾ ಸಂಘಟನೆ ಎಂಬ ಸತ್ಯವನ್ನು ಇಂದಿನ ಕಾಂಗ್ರೆಸಿಗರು ಮರೆತಿದೆ ಎಂದರು.
ಭವ್ಯ ಭಾರತದ ಕನಸು: ದೇಶದ ಸರ್ವಾಗೀಂಣ ಅಭಿವೃದ್ಧಿಗಾಗಿ ಮನೆ ಮಠಗಳನ್ನು ತೊರೆದು ತ್ಯಾಗ ಮತ್ತು ನಿಸ್ವಾರ್ಥ ಜೀವನದ ಮೂಲಕ ಭವ್ಯ ಭಾರತದ ಕನಸು ನನಸು ಮಾಡುವ ಕಾರ್ಯಗಳಿಗೆ ಕಟಿಬದ್ಧವಾದ ಸಂಘಟನೆಗಳನ್ನು ಕೋಮುವಾದಿ ಸಂಘಟನೆ ಎಂದು ಕಾಂಗ್ರೆಸ್ ನಾಯಕರು ಕೆರಯುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ವಿಷಾದಿಸಿದರು. ಜಗತ್ತಿನಲ್ಲಿ ಹಿಂದು ಧರ್ಮಿಯರಿಗೆ ಭಾರತವೇ ಜನನಿ ಮತ್ತು ಜನ್ಮಭೂಮಿಯಾಗಿದ್ದು, ಇಲ್ಲಿನ ಬಹುಸಂಖ್ಯಾತ ಹಿಂದು ಸಮಾಜದ ಮೇಲೆ ನಡೆಯುವ ದೌರ್ಜನ್ಯವನ್ನು ಪ್ರಶ್ನಿಸುವರು ಮತ್ತು ತಮ್ಮ ಹಕ್ಕುಗಳ ಸಂರಕ್ಷಣೆ ಹಾಗೂ ಧಾರ್ಮಿಕ ಕೇಂದ್ರಗಳ ರಕ್ಷಣೆಗಾಗಿ ಹೋರಾಟ ನಡೆಸುವರಿಗೆ ರಕ್ಷಣೆ ನೀಡಬೇಕಾದ ಸರ್ಕಾರ ಅಲ್ಪಸಂಖ್ಯಾತ ಸಮಾಜವನ್ನು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಬಹುಸಂಖ್ಯಾತ ಸಮಾಜದ ವಿರುದ್ಧ ಎತ್ತಿಕಟ್ಟಿ ಈವರೆಗೆ ದೇಶದ ಆಡಳಿತ ಸೂತ್ರವನ್ನು ಹಿಡಿದಿದೆ ಎಂದು ಹೇಳಿದರು.
ಜಾತ್ಯತೀತತೆ ಮನೋಭಾವ: ದೇಶದ ಜನರಲ್ಲಿ ಸಮಾನತೆ ಮತ್ತು ಜಾತ್ಯತೀತತೆ ಮನೋಭಾವನೆ ಬೆಳೆಸಬೇಕಾದ ಕಾಂಗ್ರೆಸ್ ಇಂದು ಅಧಿಕಾರದ ದಾಹಕ್ಕೆ ಸಮಾಜದ ನಡುವೆ ಜಾತಿ ಧರ್ಮಗಳ ವಿರುದ್ಧ ವಿಷ ಬೀಜ ಬಿತ್ತುತ್ತಿದೆ ಎಂದರು.
ಗೆಲುವಿಗಾಗಿ ಹೋರಾಟ: ಅಭ್ಯರ್ಥಿ ವಿಜಯಶಂಕರ್ ಮಾತನಾಡಿ, ಪಕ್ಷ ತಮಗೆ ಎಲ್ಲವನ್ನು ನೀಡಿದೆ. 4 ಬಾರಿ ಸಂಸತ್ ಸ್ಥಾನಕ್ಕೆ ಎರಡು ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಮೈಸೂರಿನಿಂದ ಅವಕಾಶ ನೀಡಿತ್ತು. ಸಾಲದೆಂಬಂತೆ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವ ಮೂಲಕ ಮಂತ್ರಿ ಸ್ಥಾನವನ್ನು ನೀಡಿ ಗೌರವಿಸಿದೆ. ಆದ್ದರಿಂದಲೇ ಪಕ್ಷದ ಮೇಲಿನ ಅಭಿಮಾನ ವರಿಷ್ಠರ ಆದೇಶದಂತೆ ಹಾಸನ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಕಾರ್ಯಕರ್ತರು ಎದೆಗುಂದದೆ ಗೆಲುವಿಗಾಗಿ ಹೋರಾಟ ನಡೆಸಬೇಕೆಂದು ಉತ್ಸಾಹ ತುಂಬಿದರು.
ನೀವು ನೀಡುವ ಮತ ಬಿಜೆಪಿ ಪಕ್ಷಕ್ಕಲ್ಲ, ಭಾರತಮಾತೆಗೆ, ಆಕೆಯ ರಕ್ಷಣೆಗೆ ಸದಾ ಸಿದ್ಧ ಎನ್ನುವ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ಕನಸನ್ನು ನನಸು ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತನ ಮೇಲಿದೆ. ಹೊಂದಾಣಿಕೆ ರಾಜಕಾರಣದಂತಹ ಮಾತುಗಳು ತಮ್ಮ ರಾಜಕೀಯ ಜೀವನದಲ್ಲಿ ಎಂದಿಗೂ ಸುಳಿದಿಲ್ಲ. ಅಂತಹ ಅನಿವಾರ್ಯ ಸ್ಥಿತಿಯನ್ನು ತಾವು ಎದುರಿಸಿಲ್ಲ ಎಂದರು.
ಮಾಜಿ ಶಾಸಕ ಎ.ಎಸ್. ಬಸವರಾಜು, ಜಿಲ್ಲಾಧ್ಯಕ್ಷ ರೇಣುಕುಮಾರ್, ಕೆ.ಎನ್. ದುರ್ಗಪ್ಪಶೆಟ್ಟಿ, ನವಿಲೆ ಅಣ್ಣಪ್ಪ, ಮಾಜಿ ಎಂಎಲ್‌ಸಿ ಗುರುದೇವ್ ತಾಲೂಕು ಅಧ್ಯಕ್ಷ ರಮೇಶ್ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement