ಅಯ್ಯಪ್ಪಸ್ವಾಮಿ ದೇಗುಲ ಆರಂಭೋತ್ಸವ
ಬೇಲೂರು: ತಾಲೂಕಿನ ಕೋಗೋಡು ಗ್ರಾಮದಲ್ಲಿ ನೀತನವಾಗಿ ನಿರ್ಮಿಸಿರುವ ಅಯ್ಯಪ್ಪಸ್ವಾಮಿ ದೇಗುಲದ ಪ್ರಾರಂಭೋತ್ಸವ ಅದ್ಧೂರಿಯಾಗಿ ಇತ್ತೀಚೆಗೆ ನಡೆಯಿತು.
ಚೀಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೋಗೋಡು ಗ್ರಾಮದಲ್ಲಿ ರಾಮಣ್ಣ ಪೂಜಾರಿ ಹಾಗೂ ಅವರ ಪುತ್ರ ಮಂಜುನಾಥ ಸುವರ್ಣ ನವರ ಸಹಾಯಹಸ್ತದಿಂದ ನಿರ್ಮಾಣಗೊಂಡಿರುವ ಅಯ್ಯಪ್ಪಸ್ವಾಮಿ ದೇಗುಲ ಭಾನುವಾರ ಲೋಕಾರ್ಪಣೆಗೊಂಡಿತು. ದೇಗುಲ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ಶನಿವಾರದಿಂದಲೇ ಹೋಮ ಹವನ, ಬಲಿ ಹಾಗೂ ಇತರೆ ಪೂಜಾ ಕೈಂಕರ್ಯ ನಡೆಸಲಾಯಿತು. ಭಾನುವಾರ ವೇ. ಬ್ರ.ತೋ.ಚ. ನರಸಿಂಹ ಮೂರ್ತಿ ನೇತೃತ್ವದಲ್ಲಿ ಚಂಡಿಕಾ ಹೋಮ, ಶತ ರುದ್ರ ಹೋಮ, ರುದ್ರಾಭಿಷೇಕ, ಸತ್ಯನಾರಾಯಣ ಪೂಜೆ ನಡೆದು ನಂತರ ಭಕ್ತಾದಿಗಳಿಗೆ ಪ್ರಸಾದವನ್ನು ವಿನಿಯೋಗಿಸಲಾಯಿತು. ಗ್ರಾಮಸ್ಥರಾದ ಶಿವಪ್ಪಗೌಡ, ಗುರಪ್ಪಗೌಡ, ಹಾಲಪ್ಪಗೌಡ, ಪುಟ್ಟಣ್ಣ, ಸಂತೋಷ್ ಹಾಗೂ ನೂರಾರು ಭಕ್ತರು ಪಾಲ್ಗೊಂಡಿದ್ದರು.