ಉಮೇದುವಾರಿಕೆ ಸಲ್ಲಿಸಿದ ಮಾಜಿ ಪ್ರಧಾನಿ ದೇವೇಗೌಡ
ಕ.ಪ್ರ.ವಾರ್ತೆ ಹಾಸನ ಮಾ. 25
ಮೊದಲಿಗೆ ಪಂಚ ದೇವರುಗಳಿಗೆ ಪೂಜೆ ಸಲ್ಲಿಸಿದ ನಂತರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಂಗಳವಾರ ಅಪಾರ ಜನಸ್ತೋಮದ ನಡುವೆ ತಮ್ಮ ನಾಮಪತ್ರ ಸಲ್ಲಿಸಿದರು.
ತಮ್ಮ ಪತ್ನಿ ಚನ್ಮಮ್ಮ, ಶಾಸಕ ವೈ.ಎಸ್.ವಿ. ದತ್ತ, ಮಾಜಿ ಸಚಿವ ರೇವಣ್ಣನವರ ಜೊತೆ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದ ಗೌಡರು, ಜಿಲ್ಲಾಧಿಕಾರಿಗಳೂ ಆದ ಚುನಾವಣಾಧಿಕಾರಿ ಅನ್ಬುಕುಮಾರ್ ಅವರಲ್ಲಿ ನಾಮಪತ್ರ ಸಲ್ಲಿಸಿದರು. ಖ್ಯಾತ ವೈದ್ಯ ಡಾ. ಮುನಿವೆಂಕಟೇಗೌಡರು ಗೌಡರಿಗೆ ಸೂಚಕರಾಗಿದ್ದರು.
ಮೆರವಣಿಗೆ: ಇದಕ್ಕೂ ಮೊದಲು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಗೌಡರು ಬಂದರು. ಆಗ ಜಿಲ್ಲಾಧಿಕಾರಿ ಕಚೇರಿ ಮತ್ತು ಕಚೇರಿ ಕಟ್ಟಡದ ಮೇಲೆ ನೆರೆದಿದ್ದ ಜನಸ್ತೋಮದತ್ತ ಗೌಡರು ನಮಸ್ಕರಿಸಿ ನಾಮಪತ್ರ ಸಲ್ಲಿಸಲು ಡಿಸಿ ಕಚೇರಿಯೊಳಗೆ ಹೋದರು. ಗೌಡರ ಶಿಷ್ಯ ವೈ.ಎಸ್.ವಿ. ದತ್ತ ಅವರು, ನಾಮಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು. ನಂತರ ರೇವಣ್ಣನವರೂ ಕೂಡ ನೋಡಿದರು. ಒಟ್ಟು 4 ಸೆಟ್ ನಾಮಪತ್ರಗಳನ್ನು ಗೌಡರು ಸಲ್ಲಿಸಿದರು.
ನಾಮಪತ್ರ ಸಲ್ಲಿಸಿ ಹೊರ ಬರುತ್ತಿದ್ದಂತೆ ನೆರೆದಿದ್ದ ಜನರು ಗೌಡರ ಪರ ಘೋಷಣೆಗಳನ್ನು ಕೂಗಿದರು. ಇದೇ ಸಂದರ್ಭದಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತರೂ ಸಹ ಅಪಾರ ಸಂಖ್ಯೆಯಲ್ಲಿ ಸೇರಿದ್ದು ವಿಶೇಷವಾಗಿತ್ತು. ಹಾಗಾಗಿ ತೆನೆ ಹೊತ್ತ ಮಹಿಳೆಯ ಬಾವುಟದ ನಡುವೆ ಎಸ್‌ಡಿಪಿಐ ಕೆಂಬಾವುಟಗಳು ರಾಜಾಜಿಸಿದವು.
ಅಗತ್ಯ ಇರೋ ಕಡೆ ಪ್ರಚಾರ: ರಾಜ್ಯಾದ್ಯಂತ ಪ್ರವಾಸ ಮಾಡಬೇಕಾಗಿದೆ. ಆದ್ದರಿಂದ ಹಾಸನ ಜಿಲ್ಲೆಯಲ್ಲಿ ಅಗತ್ಯ ಇರುವ ಕಡೆ ಪ್ರಚಾರಕ್ಕೆ ಹೋಗುತ್ತೇನೆ. ನನ್ನ ರಾಜಕೀಯ ಹುಟ್ಟು, ಬೆಳವಣಿಗೆ, ಅಂತ್ಯ ಎಲ್ಲವೂ ನನ್ನ ಜಿಲ್ಲೆಯಿಂದಲೇ. ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರೇ ಪ್ರಚಾರದ ನೇತೃತ್ವ ವಹಿಸಿ ಜನರ ಬಳಿ ಮತ ಭಿಕ್ಷೆ ಬೇಡುವರು ಎಂದು ಗೌಡರು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಷ್ಟ್ರೀಯ ವಕ್ತಾರ ತನ್ವೀರ್ ಅಹಮದ್, ಶಾಸಕರಾದ ಎಚ್.ಕೆ. ಕುಮಾರಸ್ವಾಮಿ, ಎಚ್.ಎಸ್. ಪ್ರಕಾಶ್, ಕೆ.ಎಂ. ಶಿವಲಿಂಗೇಗೌಡ, ಪಟೇಲ್ ಶಿವರಾಂ, ಸಿ.ಎನ್. ಬಾಲಕೃಷ್ಣ, ಜಿಪಂ ಅಧ್ಯಕ್ಷೆ ಅಂಬಿಕಾ ರಾಮಣ್ಣ, ಮಾಜಿ ಶಾಸಕರಾದ ಎ.ಟಿ. ರಾಮಸ್ವಾಮಿ, ಬಿ.ವಿ. ಕರೀಗೌಡ, ನಗರಸಭೆ ಅಧ್ಯಕ್ಷೆ ಶ್ರೀ ವಿದ್ಯಾ, ಮುಖಂಡರಾದ ಕೆ.ಎಂ. ರಾಜೇಗೌಡ, ಬಾಲಕೃಷ್ಣಮೂರ್ತಿ, ಇಂದಿರಾ, ಬಿ.ವಿ. ಸತ್ಯನಾರಾಯಣ, ಚಂದ್ರೇಗೌಡ, ಹುಚ್ಚೇಗೌಡ, ಬಿಳಿಚೌಡಯ್ಯ, ಹೊಳೆನರಸೀಪುರ ಬಸವರಾಜು, ಮೊಸಳೆಹೊಸಳ್ಳಿ ಚಂದ್ರೇಗೌಡಸ ಕೆ.ಎಸ್. ಮಂಜೇಗೌಡ, ಪಾರ್ವತಮ್ಮ ನಂಜುಂಡಾಚಾರ್, ಸುಲೋಚನಾ ರಾಮಕೃಷ್ಣ, ನಾಗಮ್ಮ ನಾರಾಯಣಗೌಡ ಇದ್ದರು.
7ನೇ ಚುನಾವಣೆ
ದೇವೇಗೌಡರಿಗೆ ಇದು 7ನೇ ಚುನಾವಣೆ. ಹಾಸನದಿಂದ 6 ನೇ ಬಾರಿ ಅಖಾಡಕ್ಕೆ ಇಳಿದಿದ್ದಾರೆ. 1991, 1998, 2004, 2009 ರಲ್ಲಿ ಹಾಸನದಿಂದ ಗೆದ್ದಿದ್ದ ಗೌಡರು 2014 ರ ಚುನಾವಣೆಯಲ್ಲೂ ಜೆಡಿಎಸ್ ಅಭ್ಯರ್ಥಿ. 1991ರಲ್ಲಿ ಗೌಡರು ಹಾಸನದಿಂದಲೇ ಸೋತಿದ್ದರು. 2002 ರಲ್ಲಿ ಕನಕಪುರ ಲೋಕಸಭೆ ಉಪ ಚುನಾವಣೆಯಲ್ಲಿ ಗೆದ್ದಿದ್ದರು.