ಜಾವಗಲ್‌ನಲ್ಲಿ ನರಸಿಂಹ, ಗಣಪತಿ ಹೋಮ
ಜಾವಗಲ್: ಜಾವಗಲ್ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ನರಸಿಂಹ, ಗಣಪತಿ ಹೋಮಗಳು ಇತ್ತೀಚೆಗೆ ವಿಜೃಂಭಣೆಯಿಂದ ಜರುಗಿದವು. ಪ್ರತಿಯೊಬ್ಬ ಮನುಷ್ಯನ ಮನಸ್ಸು ತೆಂಗಿನಕಾಯಿಯೊಳಗಿನ ನೀರಿನಂತೆ ಪರಿಶುಧ್ದವಾಗಿರಬೇಕೆಂದು ಯಾದವಗಿರಿ ಶ್ರೀ ಶಂಕರಾನಂದ ಸರಸ್ವತಿ ಮಠದ ಶ್ರೀ ಶ್ರೀ ಸುಬ್ರಹ್ಮಣ್ಯಭಾರತಿ ಸ್ವಾಮಿಜಿ ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಪ್ರತಿಯೊಬ್ಬರ ದೇಹದೊಳಗೆ ಭಗವಂತನಿರುತ್ತಾನೆ. ಅಜ್ಞಾನ ಎಂಬ ನೈರ್ಮಲ್ಯವನ್ನು ತೆಗೆದು ಜ್ಞಾನವೆಂಬ ಹೂಗಳಿಂದ ಪೂಜಿಸಿದರೆ ಭಗವಂತ ಸಂತೃಪ್ತನಾಗುತ್ತಾನೆ. ತಾನೂ ಬದುಕಿ, ಇತರರು ಬದುಕಲು ಅವಕಾಶ ನೀಡಬೇಕು. ಇತ್ತೀಚೆಗೆ, ಯುವಜನರಲ್ಲಿ ಗುರು- ಹಿರಿಯರಬಗ್ಗೆ ಗೌರವ ಕಡಿಮೆಯಾಗುತ್ತಿದ್ದು, ಇದು ಬದಲಾಗಬೇಕು. ಕತ್ತಲು-ಬೆಳಕು ಒಂದೇ ನಾಣ್ಯದ ಎರಡು ಮುಖದಂತಿದ್ದು ಸತ್ಕಾರ್ಯ ಮಾಡಬೇಕು. ನಿಶ್ಚಲ ಮನಸ್ಸು, ಏಕಚಿತ್ತ, ಸ್ಥಿತಪ್ರಜ್ಞತೆಯನ್ನು ಎಲ್ಲರೂ ಹೊಂದಬೇಕು ಎಂದರು.
ಪೂರ್ಣಾಹುತಿ: ಲಕ್ಷ್ಮೀನರಸಿಂಹಸ್ವಾಮಿ ದೇವರಿಗೆ ರುದ್ರಾಭಿಷೇಕ, ಕುಂಕುಮಾರ್ಚನೆ, ಪುಷ್ಷಾಲಂಕಾರ ಮಾಡಿ ಮಹಾಮಂಗಳಾರತಿ, ಉತ್ಸವಮೂರ್ತಿ ಮೆರವಣಿಗೆ ನಡೆಸಲಾಯಿತು. ಬೆಳವಾಡಿ ಸೀತಾರಾಮಜೋಯಿಸ್, ಸೋಮಸುಂದರ ಭಟ್, ವಿದ್ಯಾಶಂಕರ್, ಲಕ್ಷ್ಮೀ ನರಸಿಂಹಶಾಸ್ತ್ರಿ ಅವರ ನೇತೃತ್ವದಲ್ಲಿ ಮಹಾಮಂಡಲದ ಪೂಜೆ ಲೋಕಕಲ್ಯಾಣಾರ್ಥ ನರಸಿಂಹ. ಗಣಪತಿ, ಕಲಾಹೋಮಗಳನ್ನು ನಡೆಸಿ ಪೂರ್ಣಾಹುತಿ ನೀಡಲಾಯಿತು.
ಸಮಾರಂಭದಲ್ಲಿ ಜಾವಗಲ್ ಬ್ರಾಹ್ಮಣ ಸಂಘದ ಅಧ್ಯಕ್ಷ ರಮೇಶ್ ಜೋಯಿಸ್, ಕಾರ್ಯದರ್ಶಿ ಶ್ರೀಕಂಠಯ್ಯ, ಉಪಾಧ್ಯಕ್ಷ ನಾಗರಾಜು, ಹಾಸನ ಜಿಲ್ಲಾ ಬ್ರಾಹ್ಮಣ ಸಂಘದ ಕಾರ್ಯದರ್ಶಿ ಕೆ.ಎಸ್.ಎನ್. ಮೂರ್ತಿ ಇದ್ದರು. ಹಾಸನ, ಅರಸಿಕೆರೆ, ಬೆಳವಾಡಿ, ಕಳಸಾಪುರ ಜಾವಗಲ್‌ನ ಮಹಿಳೆಯರು ಮತ್ತು ಪುರುಷರು ಭಜನೆ, ದೇವರನಾಮಗಳು, ಕೀರ್ತನೆಗಳು, ಸಹಸ್ರನಾಮಗಳನ್ನು ಪಠಿಸಿದರು.