ಜೆಡಿಎಸ್ಗೂ ಇದು ಕಡೆಯ ಚುನಾವಣೆ: ಎ. ಮಂಜು ಲೇವಡಿ
ಹೊಳೆನರಸೀಪುರ: ಮಾಜಿ ಪ್ರಧಾನಿ ದೇವೇಗೌಡರೇ ಹೇಳಿಕೊಂಡಂತೆ ಇದು ಅವರಿಗಷ್ಟೇ ಕೊನೆಯ ಚುನಾವಣೆಯಷ್ಟೇ ಅಲ್ಲ, ರಾಜ್ಯದಲ್ಲೇ ಇದು ಜನತಾದಳಕ್ಕೆ ಕೊನೆ ಚುನಾವಣೆಯಾಗಲಿದೆ ಎಂದು ಹಾಸನ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ತಿರುಗೇಟು ನೀಡಿದರು.
ಪಟ್ಟಣದಲ್ಲಿನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ಮಂಗಳವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ, ಕಾಂಗ್ರೆಸ್ನ ಹಿರಿಯ ಮುಖಂಡ ಎಚ್.ಕೆ. ಕುಮಾರಸ್ವಾಮಿ ಅವರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ರಾಜ್ಯಾದ್ಯಂತ ಪ್ರಮುಖ ಲೋಕಸಭಾ ಕ್ಷೇತ್ರಗಳಲ್ಲಿ ಕಣಕ್ಕಿಳಿಸಲು ಅಭ್ಯರ್ಥಿಗಳೇ ಇಲ್ಲದ ಜೆಡಿಎಸ್ಗೆ ಈ ಹಿನ್ನೆಡೆ, ಚುನಾವಣೆಗೂ ಮೊದಲೇ ಫಲಿತಾಂಶ ದೊರಕಿಸಿಕೊಟ್ಟಿದೆ ಎಂದು ಲೇವಡಿ ಮಾಡಿದರು.
ಒಗ್ಗಟ್ಟಿನಿಂದ ಎದುರಿಸಲಿದ್ದೇವೆ: ಈ ಚುನಾವಣೆ ನನಗೆ ಒಂದು ಸವಾಲಿದ್ದಂತೆ ಎಂದ ಅವರು, ಮಾಜಿ ಪ್ರಧಾನಿಯನ್ನು ಎದುರಿಸಲು ಸಜ್ಜಾಗಿರುವ ನನ್ನ ರಾಜಕೀಯ ಜೀವನದಲ್ಲಿ ಇದಕ್ಕಿಂತಲೂ ದೊಡ್ಡ ಸವಾಲು ಮತ್ಯಾವುದೂ ಇಲ್ಲ. ಈ ಬಾರಿಯ ಚುನಾವಣೆಯಲ್ಲಿ 1999ರ ಫಲಿತಾಂಶ ಮರುಕಳಿಸಲಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ನ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಬಿ. ಶಿವರಾಂ ನೇತೃತ್ವದಲ್ಲಿ ಒಗ್ಗಟ್ಟಿನಿಂದ ಈ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದರು.
ಗೌಡರ ವಿರುದ್ಧ ವಾಗ್ದಾಳಿ: ಸ್ವಾತಂತ್ರ್ಯ ಬಂದ ಆರು ದಶಕಗಳಲ್ಲಿ ಐದು ದಶಕಗಳಷ್ಟು ದೀರ್ಘ ಕಾಲ ದೇವೇಗೌಡರ ಕುಟುಂಬಕ್ಕೆ ಈ ಜಿಲ್ಲೆಯ ಜನರು ಆಶೀರ್ವಾದ ಮಾಡಿದರೂ, ಗೌಡರ ಕುಟುಂಬ ಈ ಜಿಲ್ಲೆಗೆ ಕೊಟ್ಟ ಕೊಡುಗೆ ಏನು ಎಂದು ಎ. ಮಂಜು ಪ್ರಶ್ನಿಸಿದರು. ಮುಖ್ಯಮಂತ್ರಿ ಆಗಿದ್ದಾಗ, ಪ್ರಧಾನಿ ಆಗಿದ್ದಾಗಲೇ ಐಐಟಿ ತರಲಾಗದ ದೇವೇಗೌಡರು, ಈಗ ಐಐಟಿ ತರುತ್ತೇನೆ ಎಂದು ಡೋಂಗಿ ಬಿಡುತ್ತಿದ್ದಾರೆ. ಅಧಿಕಾರ ವಯಸ್ಸನ್ನು ನೋಡಿ ಬರುವುದಿಲ್ಲ, ಬದಲಿಗೆ ವಯಸ್ಸು ಮತ್ತು ಅಧಿಕಾರ ಇದ್ದಾಗ ತಮ್ಮನ್ನು ಆಶೀರ್ವದಿಸಿದ ಜನರ ಋಣ ತೀರಿಸುವ ಕಾರ್ಯ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ನಾರಾಯಣಗೌಡ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಂತರ್ ಗೌಡ, ಜಿಲ್ಲಾ ವಕ್ತಾರ ಹಾಗೂ ವಕೀಲ ಎಸ್.ಎಚ್. ಮೋಹನ್ ಕುಮಾರ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೆ. ಹರೀಶ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೇಯಸ್ ಪಟೇಲ್, ತಾ.ಪಂ. ಮಾಜಿ ಅಧ್ಯಕ್ಷ ಲಕ್ಕೂರು ಬಸವರಾಜ್, ಮಳಲಿ ಶರತ್, ಎಚ್.ಟಿ. ಲಕ್ಷ್ಮಣ, ದುದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಹಾಗೂ ಇತರರು ಇದ್ದರು.