ಟ್ರ್ಯಾಕ್ಟರ್ ಜಪ್ತಿಗೆ ಆಕ್ರೋಶ
ಕ.ಪ್ರ. ವಾರ್ತೆ ಟಿ ಅರಸೀಕೆರೆ ಟಿ ಮಾ. 25 ಟ್ರ್ಯ್ಯಾಕ್ಟರ್ ಸಲ ಪಡೆದು ಮರುಪಾವತಿಸದ ಕಾರಣ ಮುಂದಿಟ್ಟುಕೊಂಡು ರೈತನ ಟ್ರ್ಯಾಕ್ಟರ್ ಜಪ್ತಿ ಮಾಡಿದ ತಾಲ್ಲೂಕಿನ ಬೆಳಗುಂಬ ಕಾವೇರಿ ಗ್ರಾಮೀಣ ಬ್ಯಾಂಕ್‌ನ ಕ್ರಮ ಖಂಡಿಸಿ ರೈತ ಮುಖಂಡರು ಬ್ಯಾಂಕ್ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ತಾಲೂಕು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆಯಾಗಿದ್ದರೂ ರೈತರ ಟ್ರ್ಯಾಕ್ಟರ್ ಜಪ್ತಿ ಮಾಡಿರುವ ಕ್ರಮವನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿ ತಕ್ಷಣವೇ ಟ್ರ್ಯ್ಯಾಕ್ಟರ್ ಹಿಂದಿರುಗಿಸಬೇಕೆಂದು ಪಟ್ಟು ಹಿಡಿದರು.
ಎಚ್ಚರಿಕೆ: ಅಲ್ಲದೇ, 1982ರಲ್ಲಿ ರಾಜ್ಯ ಹೈಕೋರ್ಟ್ ರೈತರ ಜಮೀನು, ಟ್ರ್ಯ್ಯಾಕ್ಟರ್, ಟ್ರೈಲರ್ ಸೇರಿದಂತೆ ಕೃಷಿ ಉಪಕರಣಗಳನ್ನು ಜಪ್ತಿ ಮಾಡುವುದಕ್ಕೆ ತಡೆ ನೀಡಿದೆ. ಕಾನೂನಿನ ಮಹತ್ವ ಅರಿಯದ ಅಧಿಕಾರಿಗಳು ಈ ರೀತಿ ವರ್ತಿಸಿರುವುದು ಅಧಿಕಾರಿಗಳ ದೌರ್ಜನ್ಯದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಬೆಳವಣಿಗೆಗಳು ಮುಂದೆ ಜರುಗಿದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಆದಿಹಳ್ಳಿ ಮಧು, ಕೆ.ಪಿ.ಮಲ್ಲೇಶ್, ಗಂಗಣ್ಣ, ಟಿ.ಎಸ್. ಮಲ್ಲಿಕಾರ್ಜುನಯ್ಯ, ಲೋಕೇಶ್, ವಿರುಪಾಕ್ಷಪ್ಪ ಇನ್ನಿತರರು ಪಾಲ್ಗೊಂಡಿದ್ದರು.
ಬ್ಯಾಂಕ್‌ನ ವಿವರಣೆ: ಘಟನೆ ಬಗ್ಗೆ ವಿವರಣೆ ನೀಡಿದ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ನಾರಾಯಣಗೌಡ ಬೆಳಗುಂಬ ಗ್ರಾಮದ ಪಂಕಜಮ್ಮ ಎಂಬುವವರು ಬ್ಯಾಂಕಿನಲ್ಲಿ 2008ನೇ ಸಾಲಿನಲ್ಲಿ ಪವರ್ ಟ್ರ್ಯಾಕ್ಟರ್ ಅನ್ನು ತೆಗೆದುಕೊಳ್ಳುವಾಗ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ರು. 4 ಲಕ್ಷ ಸಾಲ ಪಡೆದಿದ್ದರು. ನಂತರ, ಸಾಲ ಪಾವತಿ ಮಾಡದ ಹಿನ್ನೆಲೆಯಲ್ಲಿ ಬಡ್ಡಿ ಸೇರಿದಂತೆ ಒಟ್ಟು ರು. 6 ಲಕ್ಷ ಹಣವನ್ನು ಬ್ಯಾಂಕಿಗೆ ಪಾವತಿಸಬೇಕಿತ್ತು. ಆದರೆ ಹಣ ಪಾವತಿಸದ ಹಿನ್ನೆಲೆಯಲ್ಲಿ ಪ್ರಧಾನ ಕಚೇರಿಯ ಆದೇಶದಂತೆ ಕಳೆದ 20 ದಿನಗಳ ಹಿಂದೆ ಬ್ಯಾಂಕ್ ಸಿಬ್ಬಂದಿ ಟ್ರ್ಯಾಕ್ಟರ್ ವಶಕ್ಕೆ ಪಡೆಯಲಾಗಿದ್ದು ಈಗ ಸುಸ್ತಿದಾರರು ಸಾಲದ ಬಾಬ್ತು ಅಲ್ಪ ಪ್ರಮಾಣದ ಹಣವನ್ನು ಹಿಂದಿರುಗಿಸಲು ಒಪ್ಪಿದ್ದು ಟ್ರ್ಯಾಕ್ಟರ್ ಅನ್ನು ವಾಪಸ್ ನೀಡಲಾಗುವುದೆಂದು ತಿಳಿಸಿದರು.
ಉಲ್ಲಂಘನೆಯ ಆರೋಪ
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಕೆಂಕೆರೆ ಸತೀಶ್, ಬ್ಯಾಂಕ್‌ನ ಕಾರ್ಯವೈಖರಿಯನ್ನು ತೀವ್ರವಾಗಿ ಆಕ್ಷೇಪಿಸಿ ಮಾತನಾಡಿದ ಅವರು, ಸರ್ಕಾರ ಬರಪೀಡಿತ ತಾಲೂಕುಗಳ ರೈತರ ಬಳಿ ಸಾಲ ವಸೂಲಾತಿಗೆ ತೆರಳಬಾರದೆಂದು ಆದೇಶ ನೀಡಿದೆ. ಆದರೆ, ಅಧಿಕಾರಿಗಳು ಪುಂಡ ಪೋಕರಿಗಳನ್ನು ಮುಂದಿಟ್ಟುಕೊಂಡು ಟ್ರಾಕ್ಟರ್ ಜಪ್ತಿ ಮಾಡಿರುವ ಕ್ರಮ ಸರ್ಕಾರದ ಆದೇಶ ಉಲ್ಲಂಘಿಸಿದಂತಾಗಿದೆ ಎಂದು ಕಿಡಿಕಾರಿದರು.