ಒಕ್ಕಲಿಗ ಮಹಿಳೆಯರಿಗೆ ತಪ್ಪು ಸಂದೇಶ: ಆರೋಪ
ಹಾಸನ: ಇತ್ತೀಚೆಗೆ ಕೆಲವು ಮಹಿಳೆಯರು ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಹೆಸರನ್ನು ಹೋಲುವ ವಿಭಿನ್ನ ಹೆಸರುಗಳನ್ನು ಬಳಸಿಕೊಂಡು ಸಂಘ ಸ್ಥಾಪನೆ ಮಾಡಿ ಒಕ್ಕಲಿಗರ ಮಹಿಳೆಯರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಎನ್. ಹೇಮಲತಾ ಆರೋಪಿಸಿದ್ದಾರೆ.
ಜಿಲ್ಲಾ ಒಕ್ಕಲಿಗ ಮಹಿಳಾ ಸಂಘವು ಕಳೆದ ಎರಡು ವರ್ಷಗಳಿಂದ ಕಾನೂನು ರೀತಿಯಲ್ಲೇ ನೋಂದಾಯಿತಗೊಂಡು ನಡೆಯುತ್ತಿರುವ ಸಂಸ್ಥೆ. ನಮ್ಮ ಸಂಸ್ಥೆ ನಿರಂತರವಾಗಿ ಸಮಾಜದ ಅಭ್ಯುದಯಕ್ಕೆ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ಸಂಘವು ಸುಮಾರು 1,000 ಸದಸ್ಯರನ್ನು ಹೊಂದಿದ್ದು, ಸಂಘವು ನಮ್ಮ ಜನಾಂಗದ ಶಕ್ತಿ ಹಾಗೂ ಶ್ರದ್ಧಾ ಕೇಂದ್ರ ವಾದ ಆದಿಚುಂಚನಗಿರಿ ಮಠದ ಶಾಖಾ ಮಠಾಧೀಶ ಶಂಭುನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಒಕ್ಕಲಿಗ ಸಮಾಜದ ಹೆಣ್ಣುಮಕ್ಕಳು ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಧ್ಯೇಯೋದ್ದೇಶಗಳನ್ನು ಅರ್ಥಮಾಡಿಕೊಂಡು ಸಂಘದ ಏಳಿಗೆಗೆ ಹಾಗೂ ಸಮಾಜದ ಏಳಿಗೆಗೆ ಕಾರಣಕರ್ತರಾಗಬೇಕೆಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.