ಖುಷ್ವಂತ್ಸಿಂಗ್, ಚಿತ್ತಾಲರಿಗೆ ಸಂತಾಪ
ಹಾಸನ: ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಇತ್ತೀಚೆಗೆ ನಿಧನರಾದ ಖ್ಯಾತ ಪತ್ರಕರ್ತ ಖುಷ್ವಂತ್ ಸಿಂಗ್ ಮತ್ತು ಖ್ಯಾತ ಸಾಹಿತಿ ಯಶವಂತ ಚಿತ್ತಾಲರ ಗೌರವಾರ್ಥ ಸಂತಾಪ ಸೂಚಕ ಸಭೆ ನಡೆಯಿತು. 2 ನಿಮಿಷಗಳ ಕಾಲ ಮೌನಾಚರಣೆ ನಡೆಸಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ನ ಗೌರವ ಕಾರ್ಯದರ್ಶಿ ಗೊರೂರು ಶಿವೇಶ್ ಮಾತನಾಡಿ, ಇತಿಹಾಸ ಕಾಲಘಟ್ಟವನ್ನು ಪರಿಚಯಿಸಿದರೆ, ಒಂದು ಸಮಾಜದ ಸಾಮಾನ್ಯ ಜನರ ಬದುಕು ಬವಣೆ ಶ್ರೇಷ್ಠತೆಯ ಬಗ್ಗೆ ಸಾಹಿತ್ಯ ಬೆಳಕು ಚೆಲ್ಲುತ್ತದೆ.
99 ವರ್ಷಗಳ ಕಾಲ ಬದುಕು ನಡೆಸಿದ್ದ ಖುಷ್ವಂತ್ ಸಿಂಗ್ ಅವರು ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಸಣ್ಣ ಪುಟ್ಟ ಘಟನೆಗಳನ್ನು ತಮ್ಮ ಪಾಕಿಸ್ತಾನಿ ಕೃತಿಯಲ್ಲಿ ಪರಿಚಯಿಸಿದ್ದಾರೆ. ಮಾನವೀಯ ತುಡಿತದ ಕಾದಂಬರಿ ಇದಾಗಿದೆ. ಜೊತೆಗೆ ನಿರ್ಭಿಡೆಯಿಂದ ಬರೆದ ಪತ್ರಕರ್ತ. ಅವರ ವ್ಯಕ್ತಿತ್ವ ಮತ್ತು ಕೃತಿಗಳ ಬಗ್ಗೆ ಸ್ಮರಿಸುವುದು ಅವರಿಗೆ ಸಲ್ಲಿಸುವ ಗೌರವ ಎಂದರು.
ಹಾಗೆಯೇ ಯಶವಂತ ಚಿತ್ತಾಲರು ಅತ್ಯಂತ ಸೂಕ್ಷ್ಮ ಸನ್ನಿವೇಶಗಳ ಕುರಿತು ಕೃತಿಗಳನ್ನು ರಚಿಸಿದ್ದಾರೆ ಎಂದು ಚಿತ್ತಾಲರ ಕತೆಯಾದಳು ಹುಡುಗಿ, ಶಿಕಾರಿ, ಕಾದಂಬರಿಗಳನ್ನು ಉದಾಹರಿಸಿದರು. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ , ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶಮೂರ್ತಿ, ಲೀಲಾವತಿ, ದಸಾಪ ಅಧ್ಯಕ್ಷ ನಾಗರಾಜ್, ಆರ್.ಪಿ. ಸತೀಶ್, ಕವಿ ಚನ್ನೇಗೌಡ, ಹರೀಶ್ ಇತರರು ಇದ್ದರು.