ಜಂಗಲ್ ಜಾಕಿ ಆತ್ಮಹತ್ಯೆ: ಪರಿಹಾರಕ್ಕೆ ಆಗ್ರಹ
ಮೈಸೂರು: ಟಿವಿ ಕಾರ್ಯಕ್ರಮದ ಮೂಲಕ ಖ್ಯಾತಿ ಪಡೆದು, ನಂತರ ಸಿನಿಮಾ ನಟನಾದ ರಾಜೇಶ್ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ದುರಂತ ಅಂತ್ಯ ಕಂಡಿದ್ದಾರೆ. ರಾಜೇಶ್ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದರೇ ಆತನ ಕುಟುಂಬಕ್ಕೆ ಪರಿಹಾರ ಕೊಡಿಸಬೈಹುದಾಗಿದೆ ಎಂದು ಮೈಸೂರು ವೈದ್ಯಕೀಯ ಕಾಲೇಜಿನ ಮನೋರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಬಿ.ಎನ್. ರವೀಶ್ ಹೇಳಿದರು.
ಆದರೆ ಆತ್ಮಹತ್ಯೆಗೆ ಕಾರಣರಾಗುವುದು ದೊಡ್ಡ ಅಪರಾಧ. ರಾಜೇಶ ಆತ್ಮಹತ್ಯೆ ಮಾಡಿಕೊಳ್ಳಲು ಇಂತಹವರೇ ಕಾರಣ ಎಂಬುದು ಗೊತ್ತಾದರೆ ಕಾನೂನು ಹೋರಾಟ ನಡೆಸಬಹುದು. ಚಿಕಿತ್ಸೆ ನೀಡಿದ ವೈದ್ಯನಾಗಿ ನಾನು ಈ ಕೆಲಸ ಮಾಡಲು ಸಾಧ್ಯವಿಲ್ಲ. ಆದರೆ, ಕಾನೂನು ಹೋರಾಟ ನಡೆಸಲು ಬೇರೆ ಯಾರಾದರೂ ಮುಂದೆ ಬರಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕ್ರಿಕೆಟ್ ಶಿಬಿರ
ಹಾಸನ: ನಗರದ ವೀನಸ್ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ 8 ರಿಂದ 16 ವರ್ಷದೊಳಗಿನ ಬಾಲಕರಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ಏಪ್ರಿಲ್ 5 ರಿಂದ ಮೇ 25 ರವರೆಗೂ ಪ್ರತಿ ದಿನ ಬೆಳಿಗ್ಗೆ 6 ರಿಂದ 8 ರವರೆಗೆ ಏರ್ಪಡಿಸಲಾಗಿದೆ.
ಈ ಶಿಬಿರದಲ್ಲಿ ಭಾಗವಹಿಸುವ ಬಾಲಕರು ಕ್ಲಬ್ನ ಕಾರ್ಯದರ್ಶಿ ಜಿ.ಎಸ್. ನಾಗರಾಜ್ (9448220 220), ಕ್ಯಾಪ್ಟನ್ ಪುಟ್ಟರಾಜ್, ಕೋಚ್ ನರಸಿಂಹರಾಜು, ಹೆಚ್. ಆರ್. ಅವರನ್ನು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದುದಾಗಿದೆ ಎಂದು ಕ್ಲಬ್ನ ಅಧ್ಯಕ್ಷ ಎಚ್. ಕೆ.ಜವರೇಗೌಡ ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಹಾಸನ: ಉಜಿರೆ ರುಡ್ಸೆಟ್ ಸಂಸ್ಥೆಯು ಏಪ್ರಿಲ್ ತಿಂಗಳಿನಲ್ಲಿ ವಸ್ತ್ರ ವಿನ್ಯಾಸ (21ದಿನಗಳು) ತರಬೇತಿಯನ್ನು ಮಹಿಳೆಯರಿಗೆ ಹಮ್ಮಿಕೊಂಡಿದ್ದು ಈ ವಿಷಯಗಳಲ್ಲಿ ಪ್ರಾಥಮಿಕ ಜ್ಞಾನ ಇರುವ ಅಭ್ಯರ್ಥಿಗಳು ಕೂಡಲೇ ಹೆಸರು ನೋಂದಾಯಿಸಿಕೊಳ್ಳಬಹುದು.
ಮುಂದಿನ ತಿಂಗಳಲ್ಲಿ ಸಂಸ್ಥೆಯಲ್ಲಿ ಕಂಪ್ಯೂಟರ್, ಡಿಟಿಪಿ ತರಬೇತಿ (45 ದಿನಗಳು), ಮಹಿಳೆಯರಿಗೆ ಬ್ಯೂಟಿ ಪಾರ್ಲರ್, ಮ್ಯಾನೇಜ್ಮೆಂಟ್ (30 ದಿನಗಳು), ಕಂಪ್ಯೂಟರ್ ಟ್ಯಾಲಿ ತರಬೇತಿ (30 ದಿನಗಳು), ಮೊಬೈಲ್ ರಿಪೇರಿ ತರಬೇತಿ (30 ದಿನಗಳು), ಟಿ.ವಿ., ಡಿ.ವಿ.ಡಿ. ಮತ್ತು ಇತರ ಡಿಜಿಟಲ್ ಎಲೆಕ್ಟ್ರಾನಿಕ್ಸ್ ಉಪಕರಣಗಳ ರಿಪೇರಿ (30 ದಿನಗಳು), ಪೋಟೋಗ್ರಫಿ ಮತ್ತು ವೀಡಿಯೋಗ್ರಫಿ (21 ದಿನಗಳು), ಗೃಹೋಪಯೋಗಿ ವಿದ್ಯುತ್ ಉಪಕರಣಗಳ ತಯಾರಿಕೆ (30 ದಿನಗಳು) ಮೋಟರ್ ರಿವೈಂಡಿಂಗ್ ಮತ್ತು ಪಂಪ್ಸೆಟ್ ರಿಪೇರಿ (30 ದಿನಗಳು), ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ (10 ದಿನಗಳು), ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ. ಅಭ್ಯರ್ಥಿಗಳು ಯಾವುದೇ ರೀತಿಯ ಶುಲ್ಕವನ್ನು ಭರಿಸಬೇಕಾಗಿಲ್ಲ. ತರಬೇತಿಯು ಊಟ ಮತ್ತು ವಸತಿ ಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ತರಬೇತಿಗಳಿಗೆ ಬರಲು 18 ರಿಂದ 45 ವರ್ಷಗಳ ವಯೋವುತಿ, ಕನ್ನಡ ಓದು ಬರಹ ಬಲ್ಲ ಯುವಕರು ಅರ್ಜಿಯನ್ನು ಬಿಳಿ ಹಾಳೆಯಲ್ಲಿ ಅರ್ಜಿನಮೂನೆಯನ್ನು ಪಡೆದು ಭರ್ತಿಮಾಡಿ ನಿರ್ದೇಶಕರು, ರುಡ್ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ- 574-240,ಬೆಳ್ತಂಗಡಿ ತಾಲೂಕು,ದ.ಕ. ಇವರಿಗೆ ಕಳುಹಿಸಬಹುದು.
ಎಸ್ಸೆಸ್ಸಿ ಪ್ರಕಟಣೆ
ಹಾಸನ: ಕೇಂದ್ರ ಸರ್ಕಾರದ ಗೃಹ ಮಂತ್ರಾಲಯದಡಿಯಲ್ಲಿ ಪೊಲೀಸ್ ಪಡೆಗಳು ಕೇಂದ್ರ ಮೀಸಲು ಪೊಲೀಸ್ ಪಡೆ, ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ, ಗಡಿ ಭದ್ರತಾ ಪಡೆ, ಸಶಸ್ತ್ರ ಸೀಮಾ ಬಲ, ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಹಾಗೂ ದೆಹಲಿ ಪೊಲೀಸ್ ಇವುಗಳಲ್ಲಿ ಲಭ್ಯವಿರುವ 2328 ಸಬ್ ಇನ್ಸ್ಪೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲು ಸ್ಟಾಫ್ ಸೆಲೆಕ್ಷನ್ ಕಮೀಷನ್ (ಎಸ್ಎಸ್ಸಿ) ಜೂ. 22ರಂದು ದೇಶದಲ್ಲೆಡೆ ಪರೀಕ್ಷೆ ನಡೆಸಲಿದೆ. ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು,ಧಾರವಾಡ ಮತ್ತು ಗುಲ್ಬರ್ಗ ಪರೀಕ್ಷಾ ಕೇಂದ್ರಗಳಾಗಿರುತ್ತದೆ. ಬಹು ಆಯ್ಕೆ ವಿಧಾನದ ಈ ಪರೀಕ್ಷೆಯಲ್ಲಿ 2 ಪ್ರಶ್ನೆ ಪತ್ರಿಕೆಗಳಿದ್ದು, ಮೊದಲನೆ ಪ್ರಶ್ನೆ ಪತ್ರಿಕೆ 4 ಭಾಗಗಳನ್ನು ಹೊಂದಿರುತ್ತದೆ. ಭಾಗ ಎ ಜನರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್, ಭಾಗ ಬಿ ಜನರಲ್ ನಾಲೆಡ್ಜ್ ಮತ್ತು ಜನರಲ್ ಅವೇರ್ನೆಸ್, ಭಾಗ ಸಿ- ಕ್ವಾಂಟಿಟೇಟೀವ್ ಆಪ್ಟಿಟ್ಯೂಡ್ ಮತ್ತು ಭಾಗ ಡಿ ಇಂಗ್ಲೀಷ್ ಕಾಂಪ್ರಹೆನ್ಷನ್, ಪ್ರತಿ ಭಾಗಕ್ಕೂ 50 ಪ್ರಶ್ನೆಗಳು, 50 ಅಂಕಗಳು. ಒಟ್ಟು 200 ಪ್ರಶ್ನೆಗಳು, 200 ಅಂಕಗಳು, 2 ಗಂಟೆ ಅವಧಿ , ಋಣಾತ್ಮಕ ಪರಿಶೀಲನಾ ಪದ್ಧತಿ ಇರುತ್ತದೆ.
ಹೆಚ್ಚಿನ ವಿವರಗಳಿಗೆ ಹಾಸನದ ಕೃಷಿಕ್ ಸರ್ವೋದಯ ಫೌಂಡೇಷನ್ ಸಂಪರ್ಕಿಸಲು ಉಪಮುಖ್ಯಸ್ಥ ಜಿ. ಎಚ್. ಅನಂತರಾಮು ತಿಳಿಸಿದ್ದಾರೆ.