ಮಂಜು ನಾಮಪತ್ರ ಸಲ್ಲಿಕೆ
ಕ.ಪ್ರ.ವಾರ್ತೆ ಹಾಸನ ಮಾ. 26
ಹಾಸನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಅವರು ಬುಧವಾರ ಕಾರ್ಯಕರ್ತರೊಂದಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ಮೆರವಣಿಗೆಯಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಬಂದ ಮಂಜು ಜೊತೆ ಅವರ ಕುಟುಂಬ ಸದಸ್ಯರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ, ಮುಖಂಡ ಎಸ್.ಎಂ. ಆನಂದ್ ಇದ್ದರು.
ಬೆಳಗ್ಗೆ ಸುಮಾರು 11 ಗಂಟೆಗೆ ಜಿಲ್ಲಾಧಿಕಾರಿಗೆ ಕಚೇರಿಗೆ ಬಂದ ಅವರು, ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಅವರಲ್ಲಿ ನಾಮಪತ್ರ ಸಲ್ಲಿಸಿದರು.
ಆನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಮಂಜು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪ್ರವಾಸ ಮಾಡಿದ್ದೇನೆ. ಜಿಲ್ಲೆಯ ಜನರ ಉತ್ಸಾಹ ನೋಡಿರುವ ನನಗೆ, ಈ ಬಾರಿ ಕಾಂಗ್ರೆಸ್‌ಗೆ ಜನ ಸಹಕರಿಸುತ್ತಾರೆ ಎಂಬ ನಂಬಿಕೆ ಇದೆ ಎಂದರಲ್ಲದೇ, ನಾಲ್ಕು ಬಾರಿ ಸಂಸದರಾಗಿದ್ದರೂ ದೇವೇಗೌಡರು ಜಿಲ್ಲೆಗೆ ನೀಡಿರುವ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಶಾಸಕನಾಗಿ ಉತ್ತಮ ಕಾರ್ಯ: ಇದೇ ಸಂದರ್ಭದಲ್ಲಿ ಅರಕಲಗೂಡಿನ ಶಾಸಕರಾಗಿ ಎ. ಮಂಜು ನೀಡಿರುವ ಕೊಡುಗೆಯೇನು ಎಂಬ ಪ್ರಶ್ನೆಗೆ ಉತ್ತರಿಸಿದ ಮಂಜು, ನಾನು 3 ಬಾರಿ ಶಾಸಕನಾಗಿದ್ದೆ. 2 ಬಾರಿ ಶಾಸಕನಾಗಿದ್ದಾಗ ನಮ್ಮ ಸರ್ಕಾರ ಇರಲಿಲ್ಲ. ಆದರೂ ಸಹ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿದ್ದೇನೆ. ಅರಕಲಗೂಡಿನಲ್ಲಿ ಕಟ್ಟೆಪುರ ಅಣೆಕಟ್ಟೆ ನಿರ್ಮಾಣ ಮಾಡಿ ಜನರಿಗೆ ಅರ್ಪಿಸಲಾಗಿದೆ. ತಾಲೂಕು ಕ್ರೀಡಾಂಗಣ, ಹೊಸ ಬಸ್ ನಿಲ್ದಾಣಗಳು ಆಗಿರೋದು ಅಭಿವೃದ್ಧಿ ಅಲ್ಲವೆ ಎಂದು ಮರುಪ್ರಶ್ನೆ ಹಾಕಿದರು. ಈಗ ಆರಕಲಗೂಡು ರಸ್ತೆ ಅಭಿವೃದ್ಧಿಗಾಗಿ ರು. 250 ಕೋಟಿ ಸರ್ಕಾರ ನೀಡಿದೆ ಎಂದರು.
ಜೊತೆಗೆ 40 ಹಳ್ಳಿಗಳ 80 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ನಡೆಸಲಾಗುತ್ತಿದೆ. ಭರವಸೆ: ನಾನು ಸಂಸದನಾಗಿ ಆಯ್ಕೆಯಾದರೆ ಅರಸೀಕೆರೆ, ಜಾವಗಲ್, ಹಳೇಬೀಡಿ, ಅರಕಲಗೂಡಿಗೆ ಕುಡಿಯುವ ನೀರು ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ.
ಮಲ್ಟಿ ವಿಲೇಜ್ ಸ್ಕೀಂ ಸರಿಯಾಗಿ ಬಳಕೆಯಾಗುತ್ತಿಲ್ಲವಾದ್ದರಿಂದ ಅದನ್ನು ಸರಿಯಾಗಿ ಬಳಸುವುದು, ಅಂಗಮಾರಿ ತಡೆಗೆ ಆಲೂಗೆಡ್ಡೆ ಸಂಶೋಧನಾ ಕೇಂದ್ರ ನಿರ್ಮಾಣದಂತಹ ಕೆಲಸಗಳನ್ನು ಮಾಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಎಸ್.ಎಂ. ಆನಂದ್, ಮುನಿಸ್ವಾಮಿ ಹಾಗೂ ಇತರರು ಇದ್ದರು.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪ್ರವಾಸ ಮಾಡಿದ್ದೇನೆ. ಜಿಲ್ಲೆಯ ಜನರ ಉತ್ಸಾಹ ನೋಡಿರುವ ನನಗೆ, ಈ ಬಾರಿ ಕಾಂಗ್ರೆಸ್‌ಗೆ ಜನ ಸಹಕರಿಸುತ್ತಾರೆ ಎಂಬ ನಂಬಿಕೆ ಇದೆ. ನಾಲ್ಕು ಬಾರಿ ಸಂಸದರಾಗಿದ್ದರೂ ದೇವೇಗೌಡರು ಜಿಲ್ಲೆಗೆ ನೀಡಿರುವ ಕೊಡುಗೆ ಏನು?
ಟಿ ಎ. ಮಂಜು, ಕಾಂಗ್ರೆಸ್ ಅಭ್ಯರ್ಥಿ