'ಯುವತಿಯರು ಸದೃಢರಾಗಬೇಕು'
ಹಾಸನ: ಇಂದಿನ ಯುವತಿಯರು ಸದೃಢ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ನಗರದ ಮಹಿಳಾ ಆಟೋ ಚಾಲಕಿ ಶಂಶದ್ ತಿಳಿಸಿದರು.
ನಗರದ ಎನ್ಡಿಆರ್ಕೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ಘಟಕದ ವತಿಯಿಂದ ಇತ್ತೀಚೆಗೆ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ತಮ್ಮ ಮದುವೆಯ ನಂತರ ದಿನಗಳನ್ನು ನೆನಪು ಮಾಡಿಕೊಂಡ ಶಂಶದ್, ತನ್ನ ಪತಿ ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಪ್ರಾರಂಭಿಸಿದರು. ಇದರಿಂದ ಮನನೊಂದು, ಒಂದು ಆಟೋ ರಿಕ್ಷಾ ಖರೀದಿ ಮಾಡಿ, 14 ವರ್ಷದಿಂದ ಆಟೋ ಚಾಲನೆ ಮಾಡಿಕೊಂಡು ಜೀವನ ಮಾಡುತ್ತಿದ್ದೇನೆ ಎಂದರು.
ಭುವನೇಶ್ವರಿ ಮದ್ಯವ್ಯಸನಿ ಮುಕ್ತಿ ಕೇಂದ್ರದ ವ್ಯವಸ್ಥಾಪಕಿ ಅಂಜಲಿ ಗೋವಿಂದರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿನಿಯರು ಸಮಾಜದಲ್ಲಿ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಆಗ ಸಮಾಜ ನಿಮ್ಮನ್ನು ಗುರುತಿಸುತ್ತದೆ ಎಂದರು.
ಪ್ರಗತಿ ಸಾಧ್ಯ: ಬೂವನಹಳ್ಳಿ ಚನ್ನಕೇಶವಸ್ವಾಮಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಪಿ. ವಿಜಯಕುಮಾರ್ ಮಾತನಾಡಿ, ಗಂಡಾಗಲಿ, ಹೆಣ್ಣಾಗಲಿ, ಇಬ್ಬರೂ ಪರಸ್ಪರ ಪೂರಕವಾಗಿರಬೇಕು. ಪರಸ್ಪರ ಸಹಕಾರ ಮನೋಭಾವನೆಯಿಂದ ಸಮಾಜದ ಪ್ರಗತಿ ಸಾಧ್ಯ ಎಂದು ತಿಳಿಸಿದರು.
ಹಾಸನ ಜಿಲ್ಲೆಯ ಸಾಧಕ ಮಹಿಳೆಯರನ್ನು ಪ್ರತಿವರ್ಷ ಗುರುತಿಸಿ, ಮಹಿಳಾ ದೌರ್ಜನ್ಯ ವಿರೋಧಿ ಸಮಿತಿ ಗೌರವಿಸಿಕೊಂಡು ಬರುತ್ತಿದೆ. ಈ ಸಂಪ್ರದಾಯ ಮುಂದುವರಿಯಬೇಕು. ಇದಕ್ಕೆ ನಮ್ಮ ಪ್ರೋತ್ಸಾಹವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಂ.ಎ. ಕೂಗೇಗೌಡ ಮಾತನಾಡಿ, ಸಂಸಾರ ಸುಖಕರವಾಗಿರಬೇಕಾದರೆ ಗಂಡ- ಹೆಂಡತಿಯ ಪಾತ್ರ ಸಮಾನವಾಗಿರಬೇಕು. ದೌರ್ಜನ್ಯವನ್ನು ಮಹಿಳೆಯರು ವಿರೋಧಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ನೀಲಕಂಠ ಎನ್. ಮನ್ವಾಚಾರ್, ಹರ್ಷಲತ, ವೀಣಾ, ಚಂದ್ರಹಾಸ, ಸಮಿತಿಯ ಸಂಚಾಲಕಿ ಸುಶೀಲ, ರೂಪ, ರಾಜೇಶ್ವರಿ, ಪ್ರಭಾಮಣಿ, ರೂಪ, ಮೊನಿಷಾ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಹಿಂದಿ ವಿಭಾಗದ ವೀಣಾ ಪ್ರಾರ್ಥಿಸಿದರು. ಹರ್ಷಲತಾ ಸ್ವಾಗತಿಸಿದರು. ಉಪನ್ಯಾಸಕಿ ಚಂದ್ರಹಾಸ ವಂದಿಸಿದರು.