ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಾಜಕಾರಣಿಗಳ ಮೆಚ್ಚುಗೆಯ ದೇಗುಲ

Rashmi Kasaragodu
Updated On : 27 Mar 2014, 12:03 pm

ಹೊಳೆನರಸೀಪುರ: ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯವು ರಾಜಕಾರಣಿಗಳಿಗೆ ಅಚ್ಚುಮೆಚ್ಚಿನ ದೇಗುಲವಾಗಿ ಪರಿವರ್ತನೆಗೊಂಡಿದ್ದು, ರಾಷ್ಟ್ರಮಟ್ಟದಲ್ಲೂ ಹೆಸರು ಮಾಡುವ ಸೂಚನೆಗಳು ಕಂಡುಬರುತ್ತಿದೆ.
ಕಾರಣ ಇಷ್ಟೇ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಅವರ ಕುಟುಂಬದವರಿಗೆ ಗೌಡರ ಹುಟ್ಟೂರಾದ ತಾಲೂಕಿನ ಹಳೇಕೋಟೆ ಬಳಿಯಲ್ಲಿನ ಹರದನಹಳ್ಳಿಯಲ್ಲಿರುವ ಶಿವನ ದೇವಾಲಯ ಎಷ್ಟು ಪ್ರಾಮುಖ್ಯವೋ ಅಷ್ಟೇ ಪ್ರಾಮುಖ್ಯತೆಯನ್ನು ಪಟ್ಟಣದಲ್ಲಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವರು ಪಡೆದಿದೆ ಎಂದರೆ ತಪ್ಪಾಗಲಾರದು.
ಏಕೆಂದರೆ, ಎಚ್.ಡಿ. ದೇವೇಗೌಡರಿರಲಿ, ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ. ರೇವಣ್ಣ ಅವರಿರಲಿ ಪಟ್ಟಣಕ್ಕೆ ಬಂದಿದ್ದಾರೆಂದರೆ, ಖಂಡಿತವಾಗಿಯೂ ಇಲ್ಲಿನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿಯೇ ಮುಂದಿನ ಕೆಲಸ ಮಾಡುವುದು ಎಂಬುದು ಜನಜನಿತ.
ಮಾಜಿ ಪ್ರಧಾನಿಗಳ ಕುಟುಂಬ ತಮ್ಮ ರಾಜಕೀಯ ಜೀವನದ ಪ್ರತಿ ಹಂತದಲ್ಲಿಯೂ ಇಲ್ಲಿನ ದೇವಾಲಯದಲ್ಲಿ ವಿಶೇಷ ಪೂಜೆ, ಪುನಸ್ಕಾರಗಳನ್ನು ನಡೆಸಿಯೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವುದು.
ಇದೇ ರೀತಿ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿರುವ ಕಾಂಗ್ರೆಸ್‌ನ ಎ. ಮಂಜು ಹಾಗೂ ಬಿಜೆಪಿಯ ಸಿ.ಎಚ್. ವಿಜಯಶಂಕರ್ ಅವರೂ ಈ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕವಷ್ಟೇ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದು ವಿಶೇಷ. ಮಾಜಿ ಪ್ರಧಾನಿ ಹಾಗೂ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ತೃತೀಯ ರಂಗದ ಅಧ್ಯಕ್ಷ ದೇವೇಗೌಡರು ಸ್ಪರ್ಧಿಸುತ್ತಿರುವ ಕಾರಣಕ್ಕೇ ಇಡೀ ದೇಶದ ಗಮನ ಸೆಳೆದಿರುವ ಹಾಸನ ಕ್ಷೇತ್ರದಲ್ಲಿ ಇದೀಗ ಈ ದೇಗುಲವೂ ಹೆಸರು ಮಾಡುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement