ಕಸಾಯಿಖಾನೆಗೆ ಸಾಗುತ್ತಿದ್ದ ಜಾನುವಾರುಗಳ ವಶ
ಹೊಳೆನರಸೀಪುರ: ಖಚಿತ ಮಾಹಿತಿಯ ಮೇರೆಗೆ ಕಸಾಯಿಖಾನೆಗೆ ಸಾಗಿಸಲು ಯತ್ನಿಸುತ್ತಿದ್ದ 45ಎಮ್ಮೆ ಕರುಗಳನ್ನು ಇಲ್ಲಿನ ಗ್ರಾಮಾಂತರ ಠಾಣೆಯ ಎಸ್ಸೈ ಲೋಕೇಶ್ ಹಾಗೂ ಅವರ ಸಿಬ್ಬಂದಿಗಳು ದಾಳಿ ನಡೆಸಿ ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ದೊಡ್ಡಹಳ್ಳಿ ಬೋರೆ ಗ್ರಾಮದಲ್ಲಿ ವರದಿಯಾಗಿದೆ.
ಪ್ರತಿ ಗುರುವಾರ ತಾಲೂಕಿನ ಹಳ್ಳಿಮೈಸೂರು ಹೋಬಳಿಗೆ ಸೇರಿದ ದೊಡ್ಡಹಳ್ಳಿ ಬೋರೆ ಗ್ರಾಮದಲ್ಲಿನ ಸಂತೆಯಿಂದ, ಮೈಸೂರಿನ ಕಸಾಯಿಖಾನೆಗೆ ಸಾಗಿಸಲು ಎರಡು ಮಿನಿ ಟೆಂಪೋಗಳಲ್ಲಿ 45 ಕರುಗಳನ್ನು ತುಂಬಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಈ ಸಂದರ್ಭದಲ್ಲಿ, ಗ್ರಾಮಾಂತರ ಠಾಣೆ ಎಸ್ಸೈ ಲೋಕೇಶ್ ಕೂಡಲೇ ವಾಹನವನ್ನು ತಡೆಯಲು ಮುಂದಾದಾಗ ವಾಹನವನ್ನು ನಿಲ್ಲಿಸಿದ ಚಾಲಕ ಹಾಗೂ ಆತನೊಂದಿಗಿದ್ದವರು ಪರಾರಿಯಾದರು.
10 ಕರುಗಳ ಸಾವು: ವಶಪಡಿಸಿಕೊಳ್ಳಲಾದ ವಾಹನವನ್ನು ಪಟ್ಟಣಕ್ಕೆ ತಂದು ಟೆಂಪೋವನ್ನು ತೆರೆದು ನೋಡಿದಾಗ, ಅತ್ಯಂತ ಕಿರಿದಾದ ಸ್ಥಳದಲ್ಲಿ ಕರುಗಳನ್ನು ತುಂಬಿದ್ದ ಪರಿಣಾಮವಾಗಿ 10ಕ್ಕೂ ಹೆಚ್ಚು ಕರುಗಳು ಸ್ಥಳದಲ್ಲೇ ಮೃತಪಟ್ಟಿದ್ದವು.
ಕೂಡಲೇ ಬೇರೊಂದು ವಾಹನವನ್ನು ಕರೆಸಿ ಬದುಕುಳಿದಿರುವ 30ಕ್ಕೂ ಹೆಚ್ಚು ಕರುಗಳಿಗೆ ನೀರು ಹಾಗೂ ಮೇವು ಹಾಕಿ, ಅವುಗಳನ್ನು ಮೈಸೂರಿನ ಗೋಶಾಲೆಗೆ ಸಾಗಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಆಕ್ರಮವಾಗಿ ಕರುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ಎರಡೂ ವಾಹನವನ್ನು ಜಪ್ತಿ ಮಾಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.