ಗೌಡರಿಂದ ಅಭಿವೃದ್ಧಿ ಆಗಿಲ್ಲ: ನಿರಂಜನ್
ಅರಸೀಕೆರೆ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಾಲ್ಲೂಕಿನ ಸಮಸ್ಯೆ ಬಗೆಹರಿಸುವಲ್ಲಿ, ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಸಂಪೂರ್ಣ ವಿಫಲವಾಗಿರುವ ಅವರಿಗೆ ಮತ ಕೇಳುವ ಹಕ್ಕಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಜಿ. ನಿರಂಜನ್ ಟೀಕಾ ಪ್ರಹಾರ ನಡೆಸಿದ್ದಾರೆ.
ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಬ್ಬ ಮಾಜಿ ಪ್ರಧಾನಿಯನ್ನು ನೀಡಿದ ಜಿಲ್ಲೆ ಯಾವ ರೀತಿ ಅಭಿವೃದ್ಧಿಯಾಗಿದೆ ಎಂಬುದಕ್ಕೆ ಸಾಕ್ಷೀಭೂತವಾಗಿ ಜಾವಗಲ್ ಹುಳಿಯಾರು, ಮಾಡಾಳು ಪಂಚನಹಳ್ಳಿ, ಹಾಸನ ದುದ್ದ ರಸ್ತೆಗಳು ಉದಾಹರಣೆಯಾಗಿದೆ ಎಂದರು.
ಟೀಕೆ: ದೇವೇಗೌಡರು ಸಂಸತ್ನಲ್ಲಿ ಹಾಸನ ಕ್ಷೇತ್ರಕ್ಕೆ ಮತ್ತು ಜಿಲ್ಲೆಯ ಬರಪೀಡಿತ ಅರಸೀಕೆರೆ ತಾಲ್ಲೂಕಿನ ಬಗ್ಗೆ ಎಷ್ಟು ಮಾತನಾಡಿದ್ದಾರೆ ಎಂಬ ದಾಖಲೆಯನ್ನು ಬಿಡುಗಡೆ ಮಾಡಲಿ ಎಂದ ಅವರು, ಮಾಜಿ ಸಚಿವ ಎಚ್.ಡಿ. ರೇವಣ್ಣ, ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು, ಅರಕಲಗೂಡಿನ ರಸ್ತೆ ಅಭಿವೃದ್ಧಿ ಮಾಡದವರು ಜಿಲ್ಲೆಯನ್ನು ಹೇಗೆ ಅಭಿವೃದ್ಧಿ ಮಾಡುತ್ತಾರೆ ಎಂದರು. ಎರಡು ಬಾರಿ ಲೋಕೋಪಯೋಗಿ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಇವರದೇ ಸರ್ಕಾರವಿದ್ದರೂ ಅರಸೀಕೆರೆ ಹಾಸನ ಮಾರ್ಗದ ರಸ್ತೆ ಏನಾಗಿದೆ ಎಂಬುದನ್ನು ಅರಿತು ಮಾತನಾಡಲಿ ಎಂದು ಟೀಕಿಸಿದರು.
ಈ ಬಾರಿ ತಕ್ಕ ಪಾಠ: ನೀರಾವರಿ, ರಸ್ತೆ ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವುದೇ ಇವರ ಕಾಯಕ. ಇದನ್ನು ಮರೆಮಾಚಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಿಂದ ವೀರಶೈವರು ಜೆಡಿಎಸ್ ಪಕ್ಷದ ಪರ ಮತಚಲಾಯಿಸುವ ನಿಲುವು ತೆಗೆದುಕೊಂಡಿದ್ದಾರೆಂದು ಹೇಳಿಕೆ ನೀಡಿಸುವಷ್ಟರ ಮಟ್ಟಿಗೆ ಸಮುದಾಯವನ್ನು ಒಡೆದು ಆಳುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅದು ರಾಜಶೇಖರ್ ಒಬ್ಬರ ಅಭಿಪ್ರಾಯವೇ ಹೊರತು ವೀರಶೈವ ಮತದಾರರದ್ದಲ್ಲ, ಜಿಲ್ಲೆಯ ವೀರಶೈವ ಮತದಾರರು ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 10 ತಿಂಗಳ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಅಭ್ಯರ್ಥಿ ಎ. ಮಂಜು ಅವರ ಜನಪರ ಕಾಳಜಿ ಈ ಚುನಾವಣೆಯಲ್ಲಿ ವರದಾನವಾಗಲಿದೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ಚಲುವನಹಳ್ಳಿ ಶೇಖರಪ್ಪ, ವಿಎಸ್ಎಸ್ಎನ್ ಸದಸ್ಯ ವೈ.ಸಿ. ಮಹೇಶಪ್ಪ ಇದ್ದರು.