ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದಲಿತರ ಅಭಿವೃದ್ಧಿ ಸಾಧನೆಯಲ್ಲಿ ಜೆಡಿಎಸ್ ಸಂಪೂರ್ಣ ವಿಫಲ

Rashmi Kasaragodu
Updated On : 28 Mar 2014, 1:33 am

ಕ.ಪ್ರ.ವಾರ್ತೆ   ಹಾಸನ   ಮಾ.27
ಜೆಡಿಎಸ್ ದಲಿತರು ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸುವಲ್ಲಿ ವಿಫಲವಾಗಿದೆ ಹಾಸನ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಆರೋಪಿಸಿದರು.
ನಗರದ ಶ್ರೀನಿವಾಸ್ ಕಲ್ಯಾಣ ಮಂಟಪದಲ್ಲಿ ದಲಿತ ಸಂಘಟನೆಗಳ ಸಂಯುಕ್ತ ವೇದಿಕೆ, ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ದಲಿತ ಸಮಾವೇಶದಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಶಾಸಕ ಎಚ್.ಡಿ. ರೇವಣ್ಣ ಅವರಿಗೆ ಚುನಾವಣೆಯ ಸಂದರ್ಭದಲ್ಲಿ ಮಾತ್ರ ದಲಿತ ಕುಟುಂಬಗಳು ನೆನಪಿಗೆ ಬರುತ್ತವೆ ಎಂದು ದೂರಿದರು.
ರು. 50 ಕೋಟಿ ವಾಪಸ್: ಅಲ್ಲದೇ, ದೇವೇಗೌಡರು ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಾಗಿದ್ದಾಗ ಹಾಗೂ ತಮ್ಮ ಕುಟುಂಬದ ಸದಸ್ಯರು ಮುಖ್ಯಮಂತ್ರಿ, ಸಚಿವರಾಗಿದ್ದಾಗ ದಲಿತರು ಮತ್ತು ಹಿಂದುಳಿದ ವರ್ಗದ ಜನರ ಸಮಸ್ಯೆಯನ್ನು ಆಲಿಸುವುದಾಗಲಿ, ಅವರ ಕಷ್ಟಗಳಿಗೆ ಸ್ಪಂದಿಸುವುದಾಗಲೀ, ಯಾವುದನ್ನೂ ಈವರೆಗೆ ಮಾಡಿಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ಹಿಂದುಳಿದ ವರ್ಗಗಳನ್ನು ಮನವೊಲಿಸಲು ಗೌಡರ ಕುಟುಂಬ ಮುಂದಾಗುತ್ತದೆ. ಲೋಕಸಭಾ ಸದಸ್ಯರಿಗೆ ಪ್ರತಿ ವರ್ಷ ಹಿಂದುಳಿದ ವರ್ಗಗಳಿಗಾಗಿ ಬಳಕೆಯಾಗುವಂತೆ ನೀಡಲಾಗುವ ರು. 50 ಕೋಟಿ ಬಳಕೆ ಮಾಡಿಕೊಳ್ಳದೆ ಕೇಂದ್ರಕ್ಕೆ ವಾಪಸ್ಸು ಕಳುಹಿಸಿದ್ದಾರೆ ಎಂದು ಆರೋಪಿಸಿದರು.
ಸೋಲು ಕಟ್ಟಿಟ್ಟ ಬುತ್ತಿ: ಜಿಲ್ಲೆಯಲ್ಲಿ ಈ ಹಿಂದೆ ನಡೆದ ರೈತ ಚಳುವಳಿ, ಚಂದ್ರಪ್ರಸಾದ್ ತ್ಯಾಗಿ ಅವರ ಹೋರಾಟದ ಫಲವಾಗಿ ಜೆಡಿಎಸ್ ಬಲಗೊಂಡಿದೆ. ಆದರೆ, ಇಂದು ಅದೇ ಸಮುದಾಯವನ್ನು ಮೂಲೆಗುಂಪು ಮಾಡಿ ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ಅವರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸೋಲು ಕಟ್ಟಿಟ್ಟ ಬುತ್ತಿ ಎಂದರು.
ನೈತಿಕ ಸೋಲು: ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಎಂ. ಆನಂದ್ ಮಾತನಾಡಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಹಾಸನ ಲೋಕಸಭಾ ಕ್ಷೇತ್ರ ಸೇರಿದಂತೆ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯ ಸಾಧಿಸಲಿದೆ. ಈ ಹಿಂದೆ ನಡೆದ ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್  ಸೋಲು ಕಂಡ ಸಂದರ್ಭದಲ್ಲಿ ದೇವೇಗೌಡ ಅವರು ನೈತಿಕವಾಗಿ ಸೋತಿದ್ದಾರೆ ಎಂದರು.
ಶೇ. 95ರಷ್ಟು ಮತ ಕಾಂಗ್ರೆಸ್ಗೆ: ರಾಜ್ಯಸಭಾ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷ ದಲಿತರಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ಶೇ.100 ರಷ್ಟು ದಲಿತರಲ್ಲಿ ಶೇ. 95ರಷ್ಟು ಮಂದಿ ಕಾಂಗ್ರೆಸ್ಗೆ ಮತ ಹಾಕುವರು ಎಂದು ತಿಳಿಸಿದರು.
ಸಮಾವೇಶದಲ್ಲಿ, ಮುಖಂಡರಾದ ಡಿ.ಸಿ. ಸಣ್ಣಸ್ವಾಮಿ, ಡಿ. ಮಲ್ಲೇಶ್, ಕೆಲವತ್ತಿ ಸೋಮಶೇಖರ್, ಮುನಿಸ್ವಾಮಿ, ತಿಮ್ಮಯ್ಯ, ಎಚ್.ಎಂ. ವಿಶ್ವನಾಥ್ ಹಾಗೂ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement