ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಾಗೇಗೌಡರಿಂದ ಜನಪದ ಸಾಹಿತ್ಯಕ್ಕೆ ಶುದ್ಧರೂಪ

Rashmi Kasaragodu
Updated On : 28 Mar 2014, 1:36 am

ಕ.ಪ್ರ.ವಾರ್ತೆ ಟಿ ಹಾಸನ ಟಿ ಮಾ. 27
ಜನಪದ ಸಾಹಿತ್ಯಕ್ಕೆ ಶುದ್ಧರೂಪ ಕೊಟ್ಟವರು ಡಾ.ಎಚ್.ಎಲ್.ನಾಗೇಗೌಡರು. ಜನಪದ ಸಾಹಿತ್ಯ ಸರ್ಕಾರದ ಮಟ್ಟದಲ್ಲೂ ಪರಿಚಯವಾಗುವುದಕ್ಕೆ ಅವಕಾಶ ಮಾಡಿಕೊಟ್ಟರು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಅಧ್ಯಯನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕರಾದ ಸಾಹಿಕಿ ಡಾ.ಕೃಷ್ಣಮೂರ್ತಿ ಹನೂರು ಹೇಳಿದ್ದಾರೆ.
ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಕನ್ನಡ ರಾಜ್ಯೋತ್ಸವ ಮತ್ತು ಜನಪದ ಕಲಾ ಸಂಭ್ರಮ ಕಾರ್ಯಕ್ರಮದಲ್ಲಿ  ಮಾತನಾಡಿದ  ಅವರು,    ಐಎಎಸ್ ಪರೀಕ್ಷೆ  ಪಾಸುಮಾಡಿ, ಜಿಲ್ಲಾಧಿಕಾರಿ ಹುದ್ದೆಯನ್ನು ನಾಗೇಗೌಡರು ಅಲಂಕರಿಸಿದ್ದರೂ ಜನಪದ ಸಾಹಿತ್ಯದ ಬಗ್ಗೆ ಅಪಾರ ಒಲವು ಮೂಡಿಸಿಕೊಂಡು ಹಳ್ಳಿ-ಹಳ್ಳಿ ತಿರುಗಿ ಜಾನಪದ ಕಲಾವಿದರನ್ನು ಭೇಟಿಮಾಡುತ್ತಿದ್ದರು.  ಜಾನಪದ ಲೋಕವನ್ನು ಆರಂಭಿಸಿದರು.  ಹಲವಾರು ಕೃತಿಗಳನ್ನು ರಚಿಸುವ ಮೂಲಕ ಜಾನಪದ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು ಎಂದು ಹೇಳಿದರು.
ಜನವಾಣಿ ಬೇರು, ಕವಿವಾಣಿ ಹೂವು, ಯಾವುದೇ ಶಿಷ್ಟ ಸಾಹಿತ್ಯಕ್ಕೆ ಜನಪದ ಸಾಹಿತ್ಯವೇ ಮೂಲಬೇರು. ಇಡೀ ಜನಾಂಗವನ್ನು ಸಾಮಾಜಿಕ ಮೌಲ್ಯಗಳತ್ತ ಕೊಂಡೊಯ್ಯುತ್ತಿರುವುದು ಇಂತಹ ಗುಡಿಸಲ ಸಾಹಿತ್ಯವೇ ಹೊರತು ಅರಮನೆಯ ಸಾಹಿತ್ಯವಲ್ಲ ಎಂದು ಹೇಳಿದರು.
ಯಶಸ್ವಿ: ಕಲಾ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ  ಡಾ.ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, ಈ ವರ್ಷವನ್ನು  ನಾಡೋಜ ಎಚ್.ಎಲ್.ನಾಗೇಗೌಡರ ವರ್ಷವನ್ನಾಗಿ ಆಚರಿಸುತ್ತಿರುವುದು ಸಂತೋಷದ ವಿಷಯ. ಗ್ರಾಮೀಣ ಪ್ರದೇಶದವರಾದ ಅವರು ಗ್ರಾಮೀಣ ಸಂಸ್ಕೃತಿಯನ್ನು  ಉಳಿಸಬೇಕೆಂಬ ಮಹದಾಸೆ ಹೊಂದಿ ಅದಕ್ಕೆ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಿ, ಜಾನಪದಲೋಕವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದರು. ನವೋದಯ ಸಾಹಿತ್ಯದ  ಸಂದರ್ಭದಲ್ಲಿ ಅವರ ಕೊಡುಗೆ ಅಪಾರವಾದುದು. ಜನಪದ ಕಲಾವಿದರನ್ನು ಭೇಟಿಮಾಡಿ ಜಾನಪದ ಸಂಗ್ರಹಮಾಡಿ ಕಲೆಯನ್ನು ಉಳಿಸುವಲ್ಲಿ ಶ್ರಮಿಸಿದವರು. ಜಾನಪದ ಸಾಹಿತ್ಯ ಸಮ್ಮೇಳನವನ್ನು ಪ್ರಾರಂಭಿಸಿದರು. ಆಡಳಿತದಲ್ಲಿ ದಕ್ಷತೆಯನ್ನು ತೋರಿದ್ದರ ಜೊತೆಗೆ ಜಾನಪದ ಕ್ಷೇತ್ರದಲ್ಲೂ ಅದೇ ದಕ್ಷತೆಯನ್ನು ಮೆರೆದವರು ಎಂದರು.
ನಿತ್ಯವೂ ರಾಜ್ಯೋತ್ಸವ: ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ  ಡಾ.ಜೆ.ಶೈಲಜಕುಮಾರಿ ಮಾತನಾಡಿ,  ಕನ್ನಡ ರಾಜ್ಯೋತ್ಸವವನ್ನು ನವೆಂಬರ್ನಲ್ಲಿ  ಆಚರಿಸುವಂತಹದ್ದು ಸಾಂಪ್ರದಾಯಿಕವಾದರೂ ಕನ್ನಡ ಅಭಿಮಾನಿಗಳಿಗೆ ನಿತ್ಯವೂ ರಾಜ್ಯೋತ್ಸವೇ ಕನ್ನಡ ನಾಡಿನಲ್ಲಿ ವಾಸಿಸುವವರಿಗೆ ಕನ್ನಡನಾಡು ನುಡಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯಿದೆ. ಅದನ್ನು ಮನಗಂಡು ಪ್ರತಿಯೊಬ್ಬ ಕನ್ನಡಿಗನೂ ಆ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದರು.
ನಮ್ಮ ಮೂಲ ಜನಪದ ಸಂಪ್ರದಾಯ, ಸಂಸ್ಕತಿಯನ್ನು ಉಳಿಸುವ ಜವಾಬ್ದಾರಿಯನ್ನು ನಮ್ಮ ಜನಪದರು  ಮಾಡುತ್ತಿದ್ದಾರೆ.  ಅವರೊಂದಿಗೆ ನಗರವಾಸಿಗಳು ಕೈ ಜೋಡಿಸಿದರೆ ಸಂಸ್ಕೃತಿಯನ್ನು ಮತ್ತಷ್ಟು ಪ್ರಖರಗೊಳಿಸಲು ಸಾಧ್ಯ. ಇಂದಿನ ನಾಗರಿಕ ಯುಗದಲ್ಲಿ ಅವುಗಳ ಬಗ್ಗೆ ಉದಾಸೀನವಿದ್ದರೂ ಮುಂದೊಮ್ಮೆ
ಅದೇ ಸಂಸ್ಕತಿ ನಮ್ಮ ಸಮಾಜವನ್ನು ಆವರಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಹಲವಾರು ಜನಪದ ಕಲಾವಿದರು ತಮ್ಮ ಕಲಾ ನೈಪುಣ್ಯತೆಯನ್ನು ಪ್ರದರ್ಶಿಸಿದರು.
ಸೀ.ಚ. ಯತೀಶ್ವರ್ ಕಾರ್ಯಕ್ರಮ ನಿರೂಪಿಸಿದರು. ಎಸ್.ಆರ್.ಹೇಮಾವತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪುಷ್ಪ ಸ್ವಾಗತಿಸಿದರು. ಶ್ರುತಿ ವಂದಿಸಿದರು. ಕಾಲೇಜಿನ ಬೋಧಕ ಹಾಗೂ ಬೋಧಕೇತರರು ಮತ್ತು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement