ಬೇಲೂರಿನಲ್ಲೂ ಬಂದೋಬಸ್ತ್
ಬೇಲೂರು: ಮಾ.28 ರಿಂದ ಪ್ರಾರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅಗತ್ಯವಿರುವ ಎಲ್ಲಾ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಇಓ ವೈ.ಬಿ. ಸುಂದರೇಶ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಇವರಲ್ಲಿ 1308 ವಿದ್ಯಾರ್ಥಿಗಳು, 1302 ವಿದ್ಯಾರ್ಥಿನಿಯರಿದ್ದಾರೆ. ಇವರಲ್ಲಿ ಒಟ್ಟು 99 ಪರೀಕ್ಷಾರ್ಥಿಗಳು ಪುನರಾವರ್ತನೆ ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.
ಪರೀಕ್ಷೆಗೆ ಪಟ್ಟಣದ ಜಿಜೆಸಿ, ಪೂರ್ಣಪ್ರಜ್ಞ, ಶಾಂತಲಾ, ಹಳೇಬೀಡಿನ ಜಿಜೆಸಿ, ಹೊಯ್ಸಳ, ಅರೇಹಳ್ಳಿ ಜಿಜೆಸಿ, ಬಿಕ್ಕೋಡು ಎಂಆರ್ಎಚ್ಎಸ್ ಶಾಲೆ, ಸಾಣೇನಹಳ್ಳಿ ಜಿಜೆಸಿ, ಚೀಕನಹಳ್ಳಿ ಜಿಹೆಚ್ ಎಸ್, ಹಗರೆ ಜಿಜೆಸಿ ಶಾಲೆಗಳನ್ನು ಪರೀಕ್ಷಾ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ.
10 ಸಿಟಿಂಗ್ ಸ್ಕ್ವಾಡ್ಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿ ಇಬ್ಬರು ಅಧಿಕಾರಿಗಳಿದ್ದು ರೊಟೇಷನ್ ಮೇಲೆ ಕರ್ತವ್ಯ ನಿರ್ವಹಿಸಲಿದ್ದಾರೆ. ತಾಲೂಕು ಮಟ್ಟದ ಅಧಿಕಾರಿಗಳ ಒಳಗೊಂಡ 6 ಸ್ವ್ಕಾಡ್ಗಳನ್ನು ರಚಿಸಲಾಗಿದ್ದು, ಪ್ರತಿ ತಂಡದಲ್ಲಿ ಇಬ್ಬರು ಅಧಿಕಾರಿಗಳು ಇರುತ್ತಾರೆ. ಪರೀಕ್ಷಾ ಕೇಂದ್ರದ ಸುತ್ತ ಇರುವ ಜೆರಾಕ್ಸ್ ಅಂಗಡಿಯನ್ನು ಬೆಳಗ್ಗೆ 8 ರಿಂದ 1 ರವರೆಗೆ ಮುಚ್ಚಿಸಲಾಗುತ್ತಿದೆ ಎಂದು ತಿಳಿಸಿದರು.
ಪರೀಕ್ಷೆಯಂದು ಸಕಲೇಶಪುರ, ಗೆಂಡೇಹಳ್ಳಿ ರಸ್ತೆ, ಹಗರೆ ಹಳೇಬೀಡು, ಪಟ್ಟಣ ಹಾಗೂ ಚೀಕನಹಳ್ಳಿ ಈ ಮಾರ್ಗದ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಕೊಂಡೊಯ್ಯಲು 4 ಮಾರ್ಗಗಳನ್ನು ಗುರುತಿಸಲಾಗಿದೆ.
ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಹೋಗುವ ವಾಹನವೇ ಪರೀಕ್ಷೆ ನಂತರ ಉತ್ತರ ಪತ್ರಿಕೆಗಳನ್ನು ಇದೇ ವಾಹನದಲ್ಲಿ ವಾಪಸು ತರುವ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ಒಳಪಡುವ ಶಾಲೆಗಳ ಶಿಕ್ಷಕರನ್ನು ಬೇರೆ ಪರೀಕ್ಷಾ ಕೇಂದ್ರಕ್ಕೆ ಮೇಲ್ವಿಚಾರಕರಾಗಿ ನಿಯೋಜಿಸಲಾಗಿದೆ ಎಂದು ಹೇಳಿದರು. ಈಗಾಗಲೇ ಪರೀಕ್ಷೆ ಭಯ ಹೋಗಲಾಡಿಸಲು ವಿದ್ಯಾರ್ಥಿಗಳಿಗೆ ಪರೀಕ್ಷೆ ಹೇಗೆ ಇರುತ್ತದೆ ಎಂಬುದರ ಕುರಿತು 1 ದಿನದ ಸಂವಾದ ನಡೆಸಿ ಮಾಹಿತಿ ನೀಡಲಾಗಿದೆ. ಪರೀಕ್ಷೆ ಬರೆಯಲು ಸೂಕ್ತ ಪೀಠೋಪಕರಣ ವ್ಯವಸ್ಥೆ ಮಾಡಲಾಗಿದ್ದು ಕೊರತೆ ಇದ್ದಲ್ಲಿ ಸಮೀಪದ ಶಾಲೆಯಿಂದ ಡೆಸ್ಕ್ಗಳನ್ನು ತರಲು ಸೂಚಿಸಲಾಗಿದೆ. ಜತೆಗೆ ಪ್ರತಿ ಕೇಂದ್ರದಲ್ಲಿ ಒಬ್ಬ ನರ್ಸ್ ಅನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.