'ಲಯನ್ಸ್ ಕ್ಲಬ್ ಉದ್ದೇಶ ಸಮಾಜದ ಸೇವೆ'
ಆಲೂರು: ಲಯನ್ಸ್ ಕ್ಲಬ್ನ ಮುಖ್ಯ ಉದ್ದೇಶ ಸಮಾಜ ಸೇವೆಯಾಗಿದ್ದು ಪ್ರಾರಂಭದಿಂದಲೂ ಸಂಸ್ಥೆಯು ಎಲ್ಲಾ ವರ್ಗದ ಜನರ ಶ್ರೇಯೋಭಿವೃದ್ಧಿಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದೆಯೆಂದು ಲಯನ್ಸ್ ಕ್ಲಬ್ನ ಜಿಲ್ಲಾ ಗೌರ್ನರ್ ಕೆ.ಸಿ.ಪ್ರಭು ಹೇಳಿದರು.
ಅವರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಮುಂತಾದ ಸಮಾಜಸೇವಾ ಕಾರ್ಯಗಳನ್ನು ನೆರವೇರಿಸಿ ಮಾತನಾಡಿ, ದೀನ ದಲಿತರ ಹಿತಕ್ಕಾಗಿ ಯಾವುದೇ ತಾರತಮ್ಯವಿಲ್ಲದೆ ಸೇವೆಯನ್ನು ಮಾಡಬೇಕೆಂದರು. ತಾಲೂಕಿನಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ನೀಲೇಶ್ ಅವರ ನೇತೃತ್ವದಲ್ಲಿ ಅನೇಕ ಸಮಾಜ ಸೇವಾ ಕೆಲಸಗಳು ನಡೆದಿವೆ. ಅವರು ಇನ್ನೂ ಉತ್ತಮ ಕಾರ್ಯಗಳನ್ನು ಕೈಗೊಂಡು ಸಂಸ್ಥೆಗೆ ಒಳ್ಳೆಯ ಹೆಸರು ತರಲೆಂದು ಹಾರೈಸಿದರು.
ಆಲೂರು ಹಾಗೂ ಬೈರಾಪುರ ಗೇಟ್ನಲ್ಲಿ ನಾಮ ಫಲಕ ಉದ್ಘಾಟನೆ, ಮರಸು ಗ್ರಾಮದಲ್ಲಿ ಸ್ತ್ರೀ ರೋಗಿಗಳ ತಪಾಸಣೆ, ಪಟ್ಟಣದ ಶಾಂಭವಿ ಕಲ್ಯಾಣ ಮಂಟಪದಲ್ಲಿ ರಕ್ತದಾನ ಶಿಬಿರ ಹಾಗೂ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಯಡೂರಿನಲ್ಲಿ 25 ಬಡ ಮಹಿಳೆಯರಿಗೆ ಬಟ್ಟೆ ಕಿಟ್ ವಿತರಣೆ, ಬೈರಾಪುರದ ಎಸ್.ವಿ.ಪಬ್ಲಿಕ್ ಸ್ಕೂಲ್ನಲ್ಲಿ ಕಣ್ಣಿನ ಹಾಗೂ ಆರೋಗ್ಯ ತಪಾಸಣೆ ಮುಂತಾದ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಪಿ.ಎಚ್. ಗುಲಾಂಸತ್ತಾರ್, ಪ್ರಗತಿ ಪರ ಸಾವಯವ ಕೃಷಿಕರಾದ ಧರ್ಮಲಿಂಗಂ ಹಾಗೂ ಕಿಟ್ಟಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.