ಶಿಕ್ಷಣ ಸಾಫಲ್ಯಕ್ಕೆ ವಸಾಹತುಶಾಹಿ
ಮೈಸೂರು: ಭಾರತದಲ್ಲಿ ಮೆಕಾಲೆ ವಸಾಹತುಶಾಹಿ ನೀತಿ ಜಾರಿಗೆ ಬಂದ ಮೇಲೆ ಶಿಕ್ಷಣ ಪಡೆಯುವಲ್ಲಿ ಸಫಲರಾಗ ಬೇಕಾಯಿತು ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು. ಮೈಸೂರು ವಿವಿಯ ಶಿಕ್ಷಣಶಾಸ್ತ್ರ ಅಧ್ಯಯನ ವಿಭಾಗವು ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸುಸ್ಥಿರ ಅಭಿವೃದ್ಧಿ ಶಿಕ್ಷಣ ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣದಿಂದ ವಂಚಿತರಾದವರು ಮೆಕಾಲೆಯ ವಸಾಹತುಶಾಹಿ ನೀತಿ ಜಾರಿಗೆ ಬಂದ ಮೇಲೆ ಶಿಕ್ಷಣ ಪಡೆಯುವಲ್ಲಿ ಸಫಲರಾಗಿದ್ದು, ಇಂದಿನ ಶಿಕ್ಷಣದಲ್ಲಿ ಈ ಬೋಧನಾ ಕಲಿಕಾ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳು ಪರೀಕ್ಷಾ ದೃಷ್ಟಿಯಿಂದ ಮಾತ್ರ ವಿದ್ಯಾಭ್ಯಾಸ ಮಾಡುತ್ತಿದ್ದು, ಜ್ಞಾನಾರ್ಜನೆಯ ದೃಷ್ಟಿಯಿಂದ ವಿದ್ಯಾಭ್ಯಾಸ ಮಾಡುತ್ತಿಲ್ಲ. ಜ್ಞಾನ ಹೊಂದುವತ್ತ ಹೆಚ್ಚು ಗಮನ ಹರಿಸಬೇಕು ಎಂದರು. ಇಂಗ್ಲಿಷ್ ಭಾಷೆಯನ್ನು ಕೇವಲ ಆಡಳಿತ ಭಾಷೆಯನ್ನಾಗಿ ಮಾತ್ರ ಉಪಯೋಗಿಸಿಕೊಂಡು ಮಾತೃ ಭಾಷೆಯಲ್ಲೇ ವ್ಯವಹಾರ ಮಾಡಬೇಕು ಹಾಗೂ ಇಂಗ್ಲಿಷ್ ತಿಳಿದವನೇ ಜ್ಞಾನಿ ಎಂಬ ಭ್ರಮೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಮಾತೃ ಭಾಷೆಯ ಮೂಲಕ ಅನ್ಯ ಭಾಷೆಗಳನ್ನು ಕಲಿಯಬೇಕು ಎಂಬುದು ಗಾಂಧೀಜಿಯ ಆಶಯವೂ ಆಗಿತ್ತು ಎಂದರು.
ಸಂಗೀತೋತ್ಸವ
ಮೈಸೂರು: ಜೆಎಸ್ಎಸ್ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಮಾ.29 ಮತ್ತು 30 ರಂದು ಸರಸ್ವತಿಪುರಂನ ನವಜ್ಯೋತಿ ಸಭಾಂಗಣದಲ್ಲಿ ಹರಿದಾಸ ಸಂಗೀತೋತ್ಸವ ನಡೆಯಲಿದೆ. ಕಾರ್ಯಕ್ರಮದಲ್ಲಿ ಅನೇಕ ಸಂಗೀತಗಾರರು, ಹರಿದಾಸರಾದ ಪುರಂದರದಾಸರು, ಕನಕದಾಸರು, ವಾದಿರಾಜರು, ಜಗನ್ನಾಥದಾಸರು, ವಿಜಯದಾಸರ ಕೃತಿಗಳನ್ನು ಪ್ರಸ್ತುತಪಡಿಸುವರು. ವಿದ್ವಾಂಸರು ಹಾಗೂ ವಿದುಷಿಯರಾದ ಡಾ.ಸುಕನ್ಯಾ ಪ್ರಭಾಕರ್, ಬಳ್ಳಾರಿ ಎಂ. ರಾಘವೇಂದ್ರ, ಎಂ.ಎಸ್. ವಿದ್ಯಾ, ಮಾನಸನಯನ, ಮಧು ಕಶ್ಯಪ್, ಎನ್. ಶ್ರೀನಾಥ್, ಕೋವಿಲಡಿ ಕಲಾ, ಎಚ್.ಎಸ್. ಪ್ರಶಾಂತ್ ಭಾಗವಹಿಸುವರು.
ಮಹಿಳಾ ದಿನ
ಮೈಸೂರು: ಕೃಷ್ಣಮೂರ್ತಿಪುರಂನ ವಿಪ್ರ ಮಹಿಳಾ ಸಂಗಮ ಟ್ರಸ್ಟ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾ.29ರ ಮಧ್ಯಾಹ್ನ 2ಕ್ಕೆ ಆಟೋಟ ಸ್ಪರ್ಧೆ ಹಾಗೂ ಸಂಜೆ 4ಕ್ಕೆ ಸಭಾ ಕಾರ್ಯಕ್ರಮವು ಜೆಎಲ್ಬಿ ರಸ್ತೆಯಲ್ಲಿರುವ ಮಹಿಳಾ ಸಮಾಜದಲ್ಲಿ ನಡೆಯಲಿದೆ.
ಕ್ರಿಕೆಟ್ ತರಬೇತಿ
ಮೈಸೂರು: ಸರಸ್ವತಿಪುರಂ ಸ್ಪೋರ್ಟ್ಸ್ ಕ್ಲಬ್, ಕುವೆಂಪುನಗರ ಕ್ರಿಕೆಟ್ ಕ್ಲಬ್ ವತಿಯಿಂದ 8 ವರ್ಷ ಮೇಲ್ಪಟ್ಟ ಬಾಲಕ ಹಾಗೂ ಬಾಲಕಿಯರಿಗಾಗಿ ಬೇಸಿಗೆ ಕ್ರಿಕೆಟ್ ಶಿಬಿರವು ಮಾ.29 ರಿಂದ 45 ದಿನಗಳ ಕಾಲ ಕುವೆಂಪುನಗರದ ಕನ್ನೇಗೌಡ ಕ್ರೀಡಾಂಗಣದಲ್ಲಿ ಆಯೋಜಿಸಿದೆ. ಹೆಚ್ಚಿನ ಮಾಹಿತಿಗಾಗಿ ಎಸ್. ಧನಂಜಯ, ಮೊ. 8904002825, ಸುದರ್ಶನಬಾಬು, ಮೊ. 9448054253 ಸಂಪರ್ಕಿಸಬಹುದು.
ಬೀಳ್ಕೊಡುಗೆ
ಮೈಸೂರು: ವಿದ್ಯಾವರ್ಧಕ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಮಾ.29 ರಂದು ಸೇವೆಯಿಂದ ನಿವೃತ್ತಿಗೊಳ್ಳುತ್ತಿರುವ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಭೂಸಮುದ್ರ ಗ್ರಾಮದ ಜವರೇಗೌಡ ಅವರಿಗೆ ಕಾಲೇಜು ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗ ಅಂದು ಬೆಳಗ್ಗೆ 11ಕ್ಕೆ ಕಾಲೇಜಿನ ಸಭಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದೆ. ಸೋಮೇಶ್ವರ ಸ್ವಾಮೀಜಿ ಸಮ್ಮುಖ ವಹಿಸುವರು. ಸಂಸ್ಥೆಯ ಅಧ್ಯಕ್ಷ ಗುಂಡಪ್ಪಗೌಡ, ಕಾರ್ಯದರ್ಶಿ ಪಿ.ವಿಶ್ವನಾಥ್, ಎಸ್.ಎನ್. ಲಕ್ಷ್ಮಿನಾರಾಯಣ ಮತ್ತು ಪ್ರೊ.ಸಿ.ಕೆ. ರೇಣುಕಾರ್ಯ ಭಾಗವಹಿಸುವರು.
ಉಪನ್ಯಾಸ
ಮೈಸೂರು: ಯಾದವಗಿರಿಯ ಶ್ರೀರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ಮಾ.29ರ ಸಂಜೆ 6ಕ್ಕೆ ವಿವೇಕ ಚೂಡಾಮಣಿ ವಿಷಯ ಕುರಿತು ಸ್ವಾಮಿ ನಿತ್ಯೇಶಾನಂದಜಿ ಅವರಿಂದ ಉಪನ್ಯಾಸ ನೀಡುವರು.