ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಋಣ ತೀರಿಸಲು ಮುಂದಾಗಿ

Rashmi Kasaragodu
Updated On : 29 Mar 2014, 1:38 am

ಕ.ಪ್ರ.ವಾರ್ತೆ ಟಿ ಮೈಸೂರು ಟಿ ಮಾ.28: ಯುವಜನತೆ ದೇಶದ ಋಣ ತೀರಿಸಲು ಮುಂದಾಗಬೇಕು ಎಂದು ಸಾಹಿತಿ ಡಾ.ಪ್ರಭುಶಂಕರ ಹೇಳಿದರು.
ಯುವರಾಜ ಕಾಲೇಜು ಹಾಗೂ ಜ್ಞಾನವಾಹಿನಿ ಸಮಿತಿ ಸಂಯುಕ್ತಾಶ್ರಯದಲ್ಲಿ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕುವೆಂಪು ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರಕವಿ ಕುವೆಂಪು ಅವರು ಸ್ವಾಮಿ ವಿವೇಕಾನಂದರ ಕುರಿತು ಬರೆದಿರುವ ಪುಸ್ತಕವನ್ನು ಯುವಜನತೆ ತಪ್ಪದೇ ಓದಬೇಕು. ಇದರಿಂದ ಪರಿವರ್ತಿತರಾಗಿ ರಾಷ್ಟ್ರಭಕ್ತಿ ಹಾಗೂ ಜನ್ಮಭೂಮಿಯ ಗೌರವ ಹೊಂದಲು ಸಾಧ್ಯವಾಗಲಿದೆ. ಆ ಮೂಲಕ ತಂದೆ ತಾಯಂದಿರ ಋಣ, ಸಮಾಜದ ಋಣ ಹಾಗೂ ದೇಶದ ಋಣ ತೀರಿಸಲು ಮುಂದಾಗಬೇಕು ಎಂದರು.
ಯುವಕರಿಗೆ ಸ್ಫೂರ್ತಿಯಾಗಿದ್ದ ಕುವೆಂಪು ಅವರು ಯಾವುದೇ ಲೋಕದ ವ್ಯವಹಾರಿಕ ಜ್ಞಾನ ಹೊಂದಿದವರಲ್ಲ. ಅಲೌಕಿಕ ಬದುಕಿನಲ್ಲಿ ಆದರ್ಶವಾಗಿ ಬಾಳಿದವರು. ಬರೆದಂತೆ ಬದುಕಿದವರು. ರಾಮಕೃಷ್ಣ ಪರಹಂಸರು, ಸ್ವಾಮಿ ವಿವೇಕಾನಂದರು ಹಾಗೂ ಶಾರದಾಮಾತೆ ಆರಾಧಕರಾಗಿದ್ದರು. ಆಧ್ಯಾತ್ಮಿಕ ಶ್ರೀಮಂತಿಕೆಯ ಜೀವನ ನಡೆಸಿದವರು ಎಂದು ಸ್ಮರಿಸಿದರು.
ಹಳ್ಳಿಯಿಂದ ಮೈಸೂರಿಗೆ ಓದುವ ಸಲುವಾಗಿ ಬಂದಿದ್ದ ಕುವೆಂಪು ಅವರು ಮೊದಲಿಗೆ ಇಲ್ಲಿನ ಸಂತೇಪೇಟೆಯಲ್ಲಿ ಸಣ್ಣ ಕೊಠಡಿಯೊಂದರಲ್ಲಿ ವಾಸವಾಗಿದ್ದರು. ಅವರ ಕಷ್ಟಗಳನ್ನು ಅರಿತ ರಾಮಕೃಷ್ಣ ಆಶ್ರಮದ ಸ್ವಾಮಿ ಸಿದ್ದೇಶ್ವರನಂದ ಹಾಗೂ ಸ್ವಾಮಿ ರಂಗನಾಥನಂದ ಅವರು ಆಶ್ರಯ ನೀಡಿದರು. ನಂತರ ಅವರು ಆಶ್ರಮದಲ್ಲಿಯೇ ನೆಲೆಸಿ, ವ್ಯಾಸಂಗ ಮಾಡಿ ಉತ್ತಮ ಬದುಕು ರೂಪಿಸಿಕೊಂಡರು ಎಂದರು.
ನಾಯಕನಾಗಲಾರೆ ಎಂದಿದ್ದರು: ಕುವೆಂಪು ಅವರ ಮನೆಗೆ ಬಂದ ಮಲೆನಾಡಿನ ಯುವಕರ ಗುಂಪೊಂದು, ಒಕ್ಕಲಿಗರ ನಾಯಕನಾಗುವಂತೆ ಕೋರಿತು. ಆಗ ಭೂಪಟ ತಂದು ತೋರಿಸಿದ ಅವರು, ಭಾರತದಲ್ಲಿ ಕರ್ನಾಟಕ ಇಲ್ಲಿದೆ, ಅದರೊಳಗೆ ಮೈಸೂರು ಇಲ್ಲಿದೆ. ಅದರೊಳಗೆ  ಬಂದಿರುವ 35 ಮಂದಿ ಇಲ್ಲಿ ನಿಂತಿದ್ದೀರಿ. ಊರಿನಲ್ಲಿಯೂ ಸುಮಾರು 350 ಮಂದಿ ಇರಬಹುದು. ನಾನು ಸಮುದಾಯವೊಂದಕ್ಕೆ ನಾಯಕನಾಗಲಾರೆ ಎಂದು ಹೇಳಿದ್ದಾಗಿ ತಿಳಿಸಿದರು.
ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಮುಖ್ಯ ಅತಿಥಿಯಾಗಿದ್ದರು. ಪ್ರಾಂಶುಪಾಲ ಪ್ರೊ.ಎಚ್. ನಂಜೇಗೌಡ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಎಸ್.ಎನ್. ಹೆಗ್ಡೆ, ಜ್ಞಾನವಾಹಿನಿ ಸಂಚಾಲಕ ಪ್ರೊ. ವೈ.ಸಿ. ನಂಜುಂಡಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement