ಕಾಂಗ್ರೆಸಿಗರಿಂದ ಸುದ್ದಿಗೋಷ್ಠಿ ಭರಾಟೆ
ಕ.ಪ್ರ.ವಾರ್ತೆ ಹಾಸನ ಮಾ. 28
ಲೋಕಸಭೆ ಚುನಾವಣೆಯ ಈ ಸಂದರ್ಭದಲ್ಲಿ ವಿವಿಧ ಪಕ್ಷಗಳು ಸುದ್ದಿಗೋಷ್ಠಿ ನಡೆಸುವುದು ಮಾಮೂಲಿ ವಿಷಯ. ಆದರೆ, ಶುಕ್ರವಾರ ಕಾಂಗ್ರೆಸ್ ಮುಖಂಡರಿಂದ ಸುದ್ದಿಗೋಷ್ಠಿಗಳ ಸುರಿಮಳೆಯೇ ಆಯಿತು. ಇದಕ್ಕೆ ಕಾರಣ ಚುನಾವಣಾ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವುದು.
ಸಿಎಂ ಆಗಮನದ ಸುದ್ದಿಯೇ ಇಲ್ಲಿನ ಕಾಂಗ್ರೆಸ್ ವಲಯದಲ್ಲಿ ಸಂಚಲನ ಸೃಷ್ಟಿ ಮಾಡಿರುವುದು ಮುಖಂಡರ ಈ ಸುದ್ದಿಗೋಷ್ಠಿಗಳ ಅಬ್ಬರ ಸಾಕ್ಷಿ ಒದಗಿಸಿತು.
ಯಾರ್ಯಾರು?: ಶುಕ್ರವಾರದ ಸುದ್ದಿಗೋಷ್ಠಿಗಳಲ್ಲಿ ಮಿನುಗಿದ್ದು, ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ಉಪಾಧ್ಯಕ್ಷ ಶ್ರೀಧರ್ ಕಲಿವೀರ್, ಕಾಂಗ್ರೆಸ್ ಮುಖಂಡ ಎಚ್.ಕೆ. ಜವರೇಗೌಡ, ಎಸ್ .ಪುಟ್ಟಸ್ವಾಮಿ, ಮುಬಷಿರ್ ಅಹಮದ್.
'ಕಾಂಗ್ರೆಸ್ನಿಂದ ನಾನಾ ಯೋಜನೆ'
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಧಾರ್ಮಿಕ ಅಲ್ಪ ಸಂಖ್ಯಾತರು ಹಾಗೂ ಎಲ್ಲಾ ಜಾತಿಗಳ ಬಡವರ ಕಲ್ಯಾಣಕ್ಕಾಗಿ ಆಹಾರ ಭದ್ರತೆ ಕಾಯಿದೆ, ಮಾಹಿತಿ ಹುಕ್ಕ ಕಾಯಿದೆ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಶಿಕ್ಷಣ ಹಕ್ಕು ಕಾಯಿದೆ ಮತ್ತು ಇನ್ನಿತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿದೆ ಎಂದು ಶ್ರೀಧರ್ ಕಲಿವೀರ್ ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡ ಆರ್. ಹೇಮಂತ್ ಹಾಗೂ ಇತರರು ಇದ್ದರು.
ಈ ಬಾರಿ ಕಾಂಗ್ರೆಸ್ಗೆ ಬೆಂಬಲ: ಪುಟ್ಟಸ್ವಾಮಿ
ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸನ್ನು ಬೆಂಬಲಿಸುತ್ತಿದ್ದು, ನಾನು ಕಳೆದ ತಿಂಗಳು ಕಾಂಗ್ರೆಸನ್ನು ಸೇರ್ಪಡೆಗೊಂಡಿದ್ದೇನೆ ಎಂದು ಹೊಳೆನರಸೀಪುರ ತಾಲೂಕು ಕುರುಬರ ಸಂಘದ ಅಧ್ಯಕ್ಷರೂ ಆದ ಕಾಂಗ್ರೆಸ್ ಮುಖಂಡ ಪುಟ್ಟಸ್ವಾಮಿ ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಪಟೇಲ್ ಶಿವಪ್ಪ, ಧರ್ಮೇಗೌಡ, ಸಿದ್ದೇಗೌಡ, ವಿಶ್ವನಾಥ್, ರಾಜು ಇದ್ದರು.
ನಿವೃತ್ತಿ ವೇತನ ಜೆಡಿಎಸ್ ಕೃಪೆಯಲ್ಲ: ಎಚ್.ಕೆ. ಜವರೇಗೌಡ
ಶಾಸಕ ಎಚ್.ಡಿ. ರೇವಣ್ಣ ಹಾಗೂ ಇತರರು ತನ್ನ ನಿವೃತ್ತಿ ಹಣ ರು. 75 ಸಾವಿರ ಬರುತ್ತಿದ್ದು, ಅದು ಜೆಡಿಎಸ್ ಕೃಪೆಯಿಂದ ಎಂದಿದ್ದಾರೆ. ಆದರೆ ಅದು ಸುಳ್ಳು ಎಂದು ಎಚ್.ಕೆ. ಜವರೇಗೌಡ ಟೀಕಿಸಿದರು. ಈಗ ಎಚ್.ಡಿ. ರೇವಣ್ಣ ಅವರು ಅವರಿವರ ಕೈಯಲ್ಲಿ ಪ್ರತಿನಿತ್ಯ ಅರೋಪಿಸುವ ಬದಲು ಅವರೇ ನೇರವಾಗಿ ನನ್ನನ್ನು ಕೇಳಲಿ, ನನಗೆ ಬರುವ ಮಾಸಿಕ ನಿವೃತ್ತಿ ಹಣವನ್ನು ಅವರಿಗೆ ನೀಡುತ್ತೇನೆ ಎಂದರು.
ಪಿಕ್ಚರ್ ಬಿಡ್ತೀನಿ: ವೈಯಕ್ತಿಕವಾಗಿ ತೇಜೋವಧೆ ಮಾಡುವುದು ಸರಿಯಲ್ಲ. ರೇವಣ್ಣ ಅವರು ಇದೇ ರೀತಿ ನನ್ನನ್ನು ಟಾರ್ಗೆಟ್ ಮಾಡಿದರೆ ರೇವಣ್ಣ ಅವರ ಬಗ್ಗೆ ಸಂಪೂರ್ಣವಾದ ಪಿಕ್ಚರ್ ಬಿಡಬೇಕಾಗುತ್ತದೆ ಎಂದು ಎಚ್ಚರಿಸಿದರು.
'ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು'
ಜಾತ್ಯಾತೀತ ಹೋರಾದ ಹಿನ್ನೆಲೆಯಿಂದ, ಬಡ ಕುಟುಂಬದಿಂದ, ಸಾಮಾಜಿಕ ಹೋರಾಟದ ಹಾದಿಯಲ್ಲಿ ಬೆಳೆದು ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ವರಿಗೂ ಸಮಬಾಳು, ಸರ್ವರಿಗು ಸಮಪಾಲು ಎಂಬಂತೆ ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಅವರನ್ನು ಸಂಪೂರ್ಣವಾಗಿ ಬೆಂಬಲಿಸಬೇಕು ಎಂದು ಮುಬಷಿರ್ ಅಹಮದ್ ಆಗ್ರಹಿಸಿದರು.
ಜೆಡಿಎಸ್ನ ಮುಖಂಡರು ಪ್ರಧಾನಿ, ಮುಖ್ಯಮಂತ್ರಿ ಮತ್ತು ಮಂತ್ರಿ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆದರೆ ಮುಸ್ಲಿಂ ಜನಾಂಗದವರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಅವರು ಟೀಕಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಮುಜಾಹಿದ್ ಪಾಷ, ಸಮೀರ್ ಅಹಮದ್, ರಿಜ್ವಾನ್ ಹಾಗೂ ಇತರರು ಇದ್ದರು.