ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ: ವಿಜಯ ಶಂಕರ್
ಹಾಸನ: ತಾವು ಹಾಸನ ಲೋಕಸಭಾ ಸದಸ್ಯರಾಗಿ ಆಯ್ಕೆಯಾದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಬಿಜೆಪಿ ಅಭ್ಯರ್ಥಿ ಸಿ. ಎಚ್. ವಿಜಯ ಶಂಕರ್ ಭರವಸೆ ನೀಡಿದ್ದಾರೆ.
ಜಾವಗಲ್ ಹೋಬಳಿಯಲ್ಲಿ ಗುರುವಾರ ಚುನಾವಣಾ ಪ್ರಚಾರ ಪ್ರಾರಂಭಿಸಿ ಜಾವಗಲ್ ಪಟ್ಟಣದ ಕಾರ್ಯಕರ್ತರ ಮನೆಗೆ ಭೇಟಿ ನೀಡಿ ಅವರೊಂದಿಗೆ ಸಮಾಲೋಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಹಾಸನ ಜಿಲ್ಲೆ ತಮಗೆ 20 ವರ್ಷದಿಂದ ಚಿರಪರಿಚಿತವಾಗಿದ್ದು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕೆಲಸಮಾಡಿದ್ದೇನೆ ಎಂದರು.
ಉತ್ತಮ ಪ್ರತಿಕ್ರಿಯೆ: ಕಳೆದ ಒಂದು ವಾರದಿಂದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದು, ಈಗ ಎಲ್ಲಾ ಹೋಬಳಿ ಹಾಗೂ ಗ್ರಾ.ಪಂ ಕೇಂದ್ರಸ್ಥಾನಗಳಿಗೆ ಭೇಟಿ ನೀಡುವ ಕೆಲಸ ಮಾಡಲಾಗುತ್ತಿದೆ. ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ ಎಂದರು.
ಶಾಶ್ವತ ಯೋಜನೆ: ಜಿಲ್ಲೆಯಲ್ಲಿ ಕುಡಿಯುವ ನೀರು, ಅಂತರ್ಜಲ ಕುಸಿತ, ತೆಂಗು, ಅಡಿಕೆ ಬೆಳೆಗಳ ನಾಶ, ಹದಗೆಟ್ಟ ರಸ್ತೆಗಳು ಕಾಡಾನೆ ಹಾವಳಿಯಂತಹ ಜ್ವಲಂತ ಸಮಸ್ಯೆಗಳಿದ್ದು ರೈತರ ಬದುಕು ಅತಂತ್ರವಾಗಿದ್ದು, ತಾವು ಲೋಕಸಭಾ ಸದಸ್ಯರಾಗಿ ಆಯ್ಕೆಯಾದಲ್ಲಿ ಜಿಲ್ಲೆಯ ಸಮಗ್ರ ಪ್ರಗತಿಗಾಗಿ ಶಾಶ್ವತ ಯೋಜನೆ ಕೈಗೊಳ್ಳುವುದಾಗಿ ತಿಳಿಸಿದರು.
ಜನತಾ ದರ್ಶನ: ಜಿಲ್ಲಾ ಕೇಂದ್ರದಲ್ಲಿ ಲೋಕಸಭೆ ಸದಸ್ಯರ ಕಚೇರಿ ತೆರೆದು ವಾರದ ಎಲ್ಲಾ ದಿನಗಳಲ್ಲೂ ಜನಸಾಮಾನ್ಯರ ಕುಂದು ಕೊರತೆ ವಿಚಾರಿಸಲಾಗುವುದು. ಪ್ರತಿ ಸೋಮವಾರ ಇಡೀ ದಿನ ಸ್ವತಃ ತಾವೇ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ, ಕೆಲಸ ಮಾಡುವ ವ್ಯವಸ್ಥೆ ನೀಡಲಾಗುವುದು ಎಂದರು.
ಶಾಶ್ವತ ಕುಡಿಯುವ ನೀರು ಮತ್ತು ಎಲ್ಲಾ ಕೆರೆ ಕಟ್ಟೆಗಳಿಗೆ ನೀರು ಒದಗಿಸುವ ಕಾರ್ಯ ಮಾಡುವುದಾಗಿ ತಿಳಿಸಿದರು.
ಉತ್ತಮ ಪ್ರತಿಕ್ರಿಯೆ: ಪ್ರಾಮಾಣಿಕತೆ, ಯೋಗ್ಯತೆಯುಳ್ಳ ಮತ್ತು ದಕ್ಷ ಆಡಳಿತ ನೀಡುವ ಮೋದಿ ನೇತೃತ್ವದ ಬಿಜೆಪಿ ಪಕ್ಷ ಬೆಂಬಲಿಸುವಂತೆ ಕರೆ ನೀಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ರೇಣುಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ 2 ಸುತ್ತಿನ ಪ್ರಚಾರ ನಡೆಸಿದ್ದು ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದೆ ಎಂದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ನವಿಲೆಅಣ್ಣಪ್ಪ, ರೈತಮೋರ್ಚಾದ ಜಿ.ಎಂ.. ಚಂದ್ರಶೇಖರ್, ಜಿಪಂ ಸದಸ್ಯರಾದ ಲಕ್ಷ್ಮಣ್ , ಜಯಶೀಲ, ಬೇಲೂರು ತಾಲೂಕು ಬಿಜೆಪಿ ಅಧ್ಯಕ್ಷ ಅಡುಗೂರು ಆನಂದ್, ಬೆಣ್ಣೂರ್ ಪೂರ್ಣೇಶ್ ಜಯಕುಮಾರ್, ಮಹಿಳಾ ಮೋರ್ಚಾ ಅಧ್ಯಕ್ಷೆ ವಿಜಯಲಕ್ಷ್ಮೀ, ಕಾರ್ಯದರ್ಶಿ ಅನಿತ, ರೇಣುಕಪ್ರಸಾದ್, ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಬೀರೇಗೌಡ ಇದ್ದರು.
ಲೋಕಸಭೆ ಸದಸ್ಯನಾದರೆ ಪ್ರತಿ ಸೋಮವಾರ ಜನರ ಸಮಸ್ಯೆಗಳನ್ನು ಆಲಿಸಲು ಜನತಾ ದರ್ಶನ ನಡೆಸುತ್ತೇನೆ. ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಲು ನಿಷ್ಠೆಯಿಂದ ದುಡಿಯುತ್ತೇನೆ.
ಟಿ ಸಿ. ಎಚ್. ವಿಜಯ ಶಂಕರ್
ಬಿಜೆಪಿ ಅಭ್ಯರ್ಥಿ