ಮಹಿಕೊ ಕಂಪನಿ ಬೀಜ ಬಳಸದಂತೆ ಸೂಚನೆ
ಮೈಸೂರು: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ ಏಳು ಜಿಲ್ಲೆಗಳಲ್ಲಿ ಮಹಿಕೋ ಸಂಸ್ಥೆಗೆ ಸೇರಿದ ಬಿಟಿ ಹತ್ತಿ ಬೀಜ ಬಳಸಿ ಬೆಳೆದ ಬೆಳೆಯು ನಷ್ಟವಾಗಿರುವುದರಿಂದ ಈ ಸಂಸ್ಥೆಗೆ ಸೇರಿದ ಬಿಟಿ ಹತ್ತಿ ಬಿತ್ತನೆ ಬೀಜಗಳನ್ನು ಮಾರಾಟ ಮಾಡದಂತೆ ರಾಜ್ಯ ಸರ್ಕಾರ ಮಾರಾಟ ಮಳಿಗೆಗಳಿಗೆ ಸೂಚನೆ ನೀಡಿದೆ.
ಸರ್ಕಾರ ನಡೆಸಿದ ಹಲವು ಸಮೀಕ್ಷೆಗಳಲ್ಲಿ ಮಹಿಕೋ ಸಂಸ್ಥೆ ತಪ್ಪಿತಸ್ಥವೆಂದು ದೃಢಪಟ್ಟಿರುವುದರಿಂದ, ಕೃಷಿ ಇಲಾಖೆಯು ಮಹಿಕೋ ಸಂಸ್ಥೆಗೆ ಸೇರಿದ ಎಲ್ಲಾ ಬಿಟಿ ಹತ್ತಿ ಹೈಬ್ರಿಡ್ ಬಿತ್ತನೆ ಬೀಜಗಳ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದೆ.
ಆದ್ದರಿಂದ ಜಿಲ್ಲೆಯಲ್ಲಿ ಯಾವುದೇ ಬಿತ್ತನೆ ಬೀಜ ವಿತರಕರಾಗಲಿ ಅಥವಾ ಮಾರಾಟಗಾರರಾಗಲಿ ಸಂಸ್ಥೆಗೆ ಸೇರಿದ ಹತ್ತಿ ಬಿತ್ತನೆ ಬೀಜಗಳನ್ನು ಮಾರಾಟ ಮಾಡಬಾರದು. ಈ ಸೂಚನೆಯನ್ನು ಮೀರಿ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ಎಚ್ಚರಿಸಿದ್ದಾರೆ.