ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ವಿವೇಕಾನಂದರ ವ್ಯಕ್ತಿತ್ವ ಬೆಳೆಸಿಕೊಳ್ಳಲು ಕರೆ'

Rashmi Kasaragodu
Updated On : 29 Mar 2014, 1:37 am

ಹಾಸನ: ಪ್ರಚಂಡ ಆತ್ಮಶಕ್ತಿಯ ಮೂಲಕ ಭಾರತೀಯ ಸನಾತನ ಸಂಸ್ಕತಿಯ ಸತ್ವವನ್ನು ಜಗತ್ತಿಗೆ ಸಾರಿದ ಸ್ವಾಮಿ ವಿವೇಕಾನಂದರ ಆದರ್ಶವನ್ನು ಮೈಗೂಡಿಸಿಕೊಂಡು ತ್ಯಾಗ ಮತ್ತು ಸೇವಾ ಮನೋಭಾವದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ ಎಂದು ಕೊಡಗು ಜಿಲ್ಲೆ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಶ್ರೀಮತ್ ಸ್ವಾಮಿ ಧರ್ಮಾತ್ಮಾನಂದಜೀ ಮಹಾರಾಜ್ ಕರೆ ನೀಡಿದ್ದಾರೆ.
ತಾಲೂಕಿನ ಮೊಸಳೆ ಹೊಸಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಯುಗ ಚೈತನ್ಯ ಸ್ವಾಮಿ ವಿವೇಕಾನಂದ ಕಾರ್ಯಕ್ರಮ ಉದ್ಘಾಟಿಸಿ, ವಿಶೇಷ ಪ್ರವಚನ ನೀಡಿದರು.
ನೈಜ ಮಾನವ ಧರ್ಮ: ವಿವೇಕಾನಂದರ ಚಿಂತನೆ, ಬೋಧನೆಗಳು ಆತ್ಮೋದ್ಧಾರದ ಮೂಲಕ ಸಮುದಾಯದ ಉದ್ಧಾರದ ಆಶಯ ಹೊಂದಿವೆ. ಜೀವನ ಮುಖ್ಯ, ಶಾಂತವಾದ ಜೀವನ ಅದಕ್ಕಿಂತ ಮುಖ್ಯ. ಇವೆರಡಕ್ಕಿಂತ ಮುಖ್ಯವಾದದ್ದು ಆತ್ಮಾನಂದ. ಇದಕ್ಕೆ ಜಾತಿ ಧರ್ಮದ ಅಂತರವಿಲ್ಲ. ಆತ್ಮಶಕ್ತಿಯನ್ನು ಅರ್ಥಮಾಡಿಕೊಂಡವರು ಮಾನಸಿಕವಾಗಿ ದೃಢರಾಗುತ್ತಾರೆ. ಕೆಟ್ಟದ್ದನ್ನು ಮಾಡದಿರುವುದು, ಒಳ್ಳೆಯದನ್ನು ಮಾಡುವುದು ನಿಜವಾದ ಮಾನವಧರ್ಮ ಎಂದರು.
ಕರೆ: ವಿವೇಕಾನಂದರ ಪ್ರಕಾರ ಪ್ರತಿಯೊಬ್ಬರಲ್ಲಿ ಒಂದು ಅದ್ಭುತ ಶಕ್ತಿ ಇರುತ್ತದೆ. ಅದು ಹೋದಲ್ಲಿ ನಾವು ಬದುಕಿದ್ದೂ ನಿಜೀವರಾಗುತ್ತೇವೆ. ಇದನ್ನು ಅರಿತುಕೊಂಡು ಇಂದಿನ ಯುವಜನಾಂಗ ಆ ಶಕ್ತಿಯನ್ನು ಜಾಗೃತಗೊಳಿಸಿ ಸದೃಢ ರಾಷ್ಟ್ರನಿರ್ಮಾಣಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.
ಮಾರ್ಗದರ್ಶನ ಅಗತ್ಯ: ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗದ ನಿವೃತ್ತ ಉಪನಿರ್ದೇಶಕ ಈರೇಗೌಡ ಮಾತನಾಡಿ,  ಹಳಿತಪ್ಪಿರುವ ಇಂದಿನ ನಮ್ಮ ಸಮಾಜಕ್ಕೆ ಸ್ವಾಮಿ ವಿವೇಕಾನಂದರ ಬೋಧನೆ, ಮಾರ್ಗದರ್ಶನ ಹಿಂದೆಂದಿಗಿಂತಲೂ ಹೆಚ್ಚಾಗಿ ಅಗತ್ಯವಿದೆ. ಪುರೋಹಿತಶಾಹಿಯ ಧರ್ಮವನ್ನು ತ್ಯಜಿಸಿ, ಸರ್ವಸಮಾನತೆಯ, ಸರ್ವರ ಉದ್ಧಾರದ ಧರ್ಮವನ್ನು ನಾವು ಅಪ್ಪಿಕೊಳ್ಳಬೇಕಿದೆ ಎಂದರು.
ಅಧ್ಯತ್ಮಿಕ ಶಕ್ತಿ ಅವಶ್ಯ: ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಡಿ. ಶ್ರೀನಿವಾಸ ಮಾತನಾಡಿ, ತನಗೆ ವ್ಯಾವಹಾರಿಕವಾಗಿ ಬೇಕಾದ್ದನ್ನೆಲ್ಲ ಪಡೆಯುವುದೇ ಜೀವನದ ಸಾಧನೆ ಎಂದು ಭಾವಿಸಿದ್ದ ಮನುಷ್ಯ ಒತ್ತಡಗಳಿಗೆ ಒಳಗಾಗಿ, ಇಂದು ಆಧ್ಯಾತ್ಮಿಕ ಶಾಂತಿಯ ಹುಡುಕಾಟದಲ್ಲಿದ್ದಾನೆ.ಯುವಜನತೆಗೆ ಇಂದು ಅಧ್ಯಾತ್ಮಿಕ ಶಕ್ತಿಯ ಅವಶ್ಯಕತೆ ಇದೆ ಎಂದರು.
ನಿವೃತ್ತ ಶಿಕ್ಷಕ ರಂಗಸ್ವಾಮಿ, ಹಾಸನ ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ದೇವೇಗೌಡ ಇದ್ದರು. ವಾಣಿಜ್ಯ ವಿಭಾಗದ ರಾಮಪ್ರಿಯ ಪ್ರಾರ್ಥಿಸಿದರು, ಇತಿಹಾಸ ವಿಭಾಗದ ಎಂ.ಪಿ.ಗೋಪಾಲ್ ಸ್ವಾಗತಿಸಿದರು. ಗ್ರಂಥಪಾಲಕ ಎನ್. ಮಂಜುನಾಥ್ ವಂದಿಸಿದರು. ಅರ್ಥ್ಥಶಾಸ್ತ್ರ ವಿಭಾಗದ ಎಂ. ಮಾದೇಗೌಡ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement