ಆಹಾರ ಭದ್ರತೆ ಕ್ರಾಂತಿಕಾರಿ ಕಾಯ್ದೆ: ಪ್ರೊ. ರವಿವರ್ಮ ಕುಮಾರ್
ಮೈಸೂರು: ಆಹಾರ ಭದ್ರತೆ ಮಸೂದೆ ಅಪೌಷ್ಟಿಕತೆ ನಿವಾರಣೆಗೆ ಕ್ರಾಂತಿಕಾರಕ ಕಾಯ್ದೆ ಎಂದು ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಅಭಿಪ್ರಾಯಪಟ್ಟರು.
ಕರ್ನಾಟಕ ಕಾನೂನು ಮತ್ತು ಸಂಸದೀಯ ಪುನರ್ಸ್ಥಾಪನಾ ಸಂಸ್ಥೆ ಹಾಗೂ ವಿದ್ಯಾವರ್ಧಕ ಕಾನೂನು ಕಾಲೇಜು ಸಂಯುಕ್ತಾಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಆಹಾರ ಭದ್ರತಾ ಕಾಯ್ದೆ 2013 ಸಮಸ್ಯೆ ಮತ್ತು ಸವಾಲುಗಳು ಎಂಬ ವಿಷಯ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಹಸಿವು ಮತ್ತು ಬಡತನದಿಂದಾಗಿ ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಕಂಡು ಬಂದಿದ್ದು, ಹುಟ್ಟುವ ಪ್ರತಿಯೊಂದು ಮಗುವಿಗೂ ಮೊದಲ ಎರಡು ವರ್ಷದವರೆಗೆ ಪೌಷ್ಟಿಕ ಆಹಾರ ನೀಡದಿದ್ದರೆ ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆ ಅಸಾಧ್ಯ. ಹಸಿವು ಮುಕ್ತಗೊಳಿಸಿ ಎಲ್ಲರಿಗೂ ಪೌಷ್ಟಿಕ ಆಹಾರ ಒದಗಿಸುವಲ್ಲಿ ಆಹಾರ ಭದ್ರತಾ ಕಾಯ್ದೆ ಸಹಕಾರಿಯಾಗಿದೆ ಎಂದರು.
ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಹಾಗೂ ಕುಟುಂಬಕ್ಕೆ 35 ಕೆಜಿ ಆಹಾರವನ್ನು ನೀಡಬೇಕಿದೆ. ಗರ್ಭೀಣಿ ಹಾಗೂ ಜನನದ ನಂತರ 6 ತಿಂಗಳವರೆಗೆ ತಾಯಿ ಮತ್ತು ಮಗುವಿಗೆ ಅಂಗನವಾಡಿ ಮೂಲಕ ಪೌಷ್ಟಿಕ ಆಹಾರ ನೀಡಬೇಕು ಎಂದರು.