ಗೌಡ್ರ ಆಸ್ತಿ ತನಿಖೆಯಾಗಲಿ
ಕ.ಪ್ರ.ವಾರ್ತೆ ಟಿ ಹಾಸನ ಟಿ ಮಾ. 29
ನಗರದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ವೇದಿಕೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದೇ ಹೆಚ್ಚು. ಸಿಎಂ ಸಿದ್ದರಾಮಯ್ಯ ಸೇರಿದಂತೆ ಮಾತನಾಡಿದ ಬಹುತೇಕ ಗಣ್ಯರೂ ವಾಗ್ದಾಳಿ ನಡೆಸಿದ್ದು ದೇವೇಗೌಡ ಮತ್ತು ಕುಟುಂಬದ ವಿರುದ್ಧವೇ.
ಅಲ್ಲದೇ ಬಿಜೆಪಿಗಿಂತ ಹೆಚ್ಚಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ವಿರುದ್ದವೂ ವಾಗ್ದಾಳಿ ನಡೆಸಲಾಯಿತು. ಕಾಂಗ್ರೆಸ್ ಮುಖಂಡರು ಗೌಡರ ಕುಟುಂಬ ರಾಜಕಾರಣವನ್ನು ಟೀಕಿಸುತ್ತಲೇ ಇಂದಿರಾಗಾಂಧಿ ಕುಟುಂಬ ರಾಜಕಾರಣವನ್ನು ಹೊಗಳಿ ಅಟ್ಟಕ್ಕೇರಿಸಿದರು. ರಾಜ್ಯ ಸಚಿವರು, ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಜನಪರ ಕೆಲಸ ಮಾಡುತ್ತಿದೆ ಎಂದು ಹೊಗಳುತ್ತಲೇ ಗೌಡರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿ, ಸಚಿವ ಡಿ.ಕೆ. ಶಿವಕುಮಾರ್ ಅಕ್ರಮ ಆಸ್ತಿ ಪಾಸ್ತಿ ಗಳಿಸಿದ್ದಾರೆ ಎಂದು ಮಾಜಿ ಪಿಎಂ ದೇವೇಗೌಡ ಮತ್ತವರ ಮಕ್ಕಳು ಆರೋಪ ಮಾಡುತ್ತಾರೆ. ಹಾಗೆಯೇ ಗೌಡರ ಕುಟುಂಬದವರು ಸಾವಿರಾರು ಕೋಟಿ ರು. ಆಸ್ತಿಯನ್ನು ಮಾಡಿದ್ದಾರೆ ಎಂಬ ಆರೋಪ ಇದೆ. ಆದ್ದರಿಂದ ಸಿಬಿಐ ತನಿಖೆ ಡಿಕೆಶಿ ಮತ್ತು ಗೌಡರ ಕುಟುಂಬದವರ ವಿರುದ್ದ ನಡೆಯಬೇಕು ಎಂದು ಒತ್ತಾಯಿಸಿದರು.
ದೇವೇಗೌಡರು ಮತ್ತವರ ಪುತ್ರ ದೊಡ್ಡ ಕೈಗಾರಿಕೋದ್ಯಮಿಗಳೇ. ಆಲೂಗಡ್ಡೆ, ತೆಂಗಿನಕಾಯಿ ಮಾರಿ ಇಷ್ಟು ಆಸ್ತಿ ಗಳಿಸಿದ್ದಾರಾ ? ಎಂದ ಅವರು, ಪ್ರಧಾನಿ, ಮುಖ್ಯಮಂತ್ರಿ ಆಗಿದ್ದ ಗೌಡರು ಮತ್ತು ಎಚ್ಡಿಕೆ ನೀರಾವರಿ ಮತ್ತು ಲೋಕೋಪಯೋಗಿ ಮತ್ತಿತರ ಎಲ್ಲಾ ಖಾತೆಗಳನ್ನು ನಿರ್ವಹಿಸಿದ್ದಾರೆ ಎಂದರು. ತಮ್ಮ ಕೈಯಲ್ಲಿ ಅಧಿಕಾರ ಇದ್ದಾಗ ನೆನಪಿನಲ್ಲಿ ಇಟ್ಟುಕೊಳ್ಳುವಂಥ ಕಾರ್ಯ ಮಾಡಿದ್ದಾರೆ.
ಇಂದಿರಾಗಾಂಧಿ ಅವರು ಬ್ಯಾಂಕ್ ರಾಷ್ಟ್ರೀಕರಣ ಮಾಡಿದರು. ಉಳುವವನಿಗೆ ಭೂಮಿ ಯೋಜನೆ ಜೊತೆಗೆ 20 ಅಂಶಗಳ ಕಾರ್ಯಕ್ರಮ ತಂದರು, ಸೋನಿಯಾಗಾಂಧಿ ಅವರು ಆನೇಕ ಜನಪಯೋಗಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಯೋಜನೆಗಳು ಪೂರ್ಣ: ಢೋಂಗಿ ರಾಜಕಾರಣ ಮಾಡುವ ಗೌಡರ ಕುಟುಂಬದವರು ಗಾಜಿನ ಮನೆಯಲ್ಲಿ ಇದ್ದುಕೊಂಡು ಬೇರೆಯವರ ಮನೆಗೆ ಕಲ್ಲು ಹೊಡೆಯುತ್ತಾರೆ.
1996 ಮತ್ತು 2005ರಲ್ಲಿ ನನಗೆ ಸಿಎಂ ಆಗುವುದನ್ನು ತಪ್ಪಿಸಿದ್ದೇ ಗೌಡರು ಮತ್ತವರ ಮಕ್ಕಳು. ಜಾತಿ ಜಾತಿಗಳನ್ನು ಒಡೆಯುವವರು ನಾವಲ್ಲ ಅದು ಗೌಡರು ಮಾತ್ರ. ಮುಂದಿನ 5 ವರ್ಷಗಳಲ್ಲಿ ಕಾವೇರಿ, ಕೃಷ್ಣ ಮತ್ತು ಗೋದಾವರಿ ಕಣಿವೆಯ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಕೆಪಿಪಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಮಾತನಾಡಿ, ರಾಜ್ಯದಲ್ಲೇ ಜೆಡಿಎಸ್ ಪ್ರಬಲವಾಗಿಲ್ಲ. ಆದರೂ ತೃತೀಯ ರಂಗದ ಬಗ್ಗೆ ಮಾತನಾಡುತ್ತೀರಿ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಮಂಜು ಗೆಲ್ಲುವುದು ಗ್ಯಾರಂಟಿ ಎಂದರು.
ಇದೇ ಕಾಲಕ್ಕೆ ಮಾಜಿ ಸಚಿವ ಬಿ.ಎಲ್. ಶಂಕರ್, ಕಾಂಗ್ರೆಸ್ ಬಿಟ್ಟು ಕೇಂದ್ರದಲ್ಲಿ ಸರ್ಕಾರ ರಚಿಸಲಿಕ್ಕೆ ಸಾಧ್ಯವೇ ಇಲ್ಲ ಪ್ರತಿಪಾದಿಸಿದರು.
ಸಚಿವ ಎಚ್.ಎಸ್. ಮಹಾದೇವಪ್ರಸಾದ್ ಅವರು ಮಾತನಾಡಿ, ಅನ್ನ ಭಾಗ್ಯ, ಕ್ಷೀರ ಭಾಗ್ಯ ಯೋಜನೆಗಳನ್ನು ಜಾರಿ ತಂದು ಬಡವರಿಗೆ ನೆರವಾಗಿದೆ. ಸಿದ್ದರಾಮಯ್ಯ ಸರ್ಕಾರ ಹಾಲು ಉತ್ಪಾದಕರಿಗೆ ರು. 4 ಬೆಂಬಲ ಬೆಲೆ ನೀಡಲಾಯಿತು. ರು. 3 ಲಕ್ಷ ವರೆಗೆ ರೈತರಿಗೆ ಬಡ್ಡಿ ಶೂನ್ಯ ಸಾಲ ನೀಡಲು ನಿರ್ಧರಿಸಲಾಯಿತು. ಇದೆಲ್ಲಾ ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ತಿಳಿಯುವುದೇ ಇಲ್ಲ ಎಂದು ಟೀಕಿಸಿದರು.
ಮುಖ್ಯಮಂತ್ರಿಗೆ ಅದ್ಧೂರಿ ಸ್ವಾಗತ
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶನಿವಾರ ನಗರದಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಬೂವನಹಳ್ಳಿ ಏರ್ಪೋರ್ಟ್ ಗೆ ಹೆಲಿಕ್ಯಾಪ್ಟರ್ನಲ್ಲಿ ಆಗಮಿಸಿದ ಮುಖ್ಯಮಂತ್ರಿಗಳನ್ನು ಕಾಂಗ್ರೆಸ್ ಮುಖಂಡರು ಹಾರ ಬಾಕಿ ಬರ ಮಾಡಿಕೊಂಡರು. ನಂತರ ನಡೆದ ಕಾರ್ಯಕರ್ತರ ಸಭೆಯಲ್ಲಿ ಶಾಸಕ ವೈ.ಎನ್. ರುದ್ರೇಶ್ ಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಲಲಿತಮ್ಮ, ಮಾಜಿ ಶಾಸಕ ಎಸ್.ಎಂ. ಆನಂದ್, ಕಾಂಗ್ರೆಸ್ ಮುಖಂಡರಾದ ಎಚ್.ಪಿ. ಮೋಹನ್, ಅನುಪಮ, ಚಂದ್ರಕಲಾ, ಮಲ್ಲಿಗೆ ವೀರೇಶ್, ಡಿ. ಮಲ್ಲೇಶ್, ಎಚ್.ಕೆ. ಮಹೇಶ್, ವಿನಯ್ ಗಾಂಧಿ, ಎ.ಜಿ.ಹರಿಗೋಪಾಲ್, ಎಚ್.ಎಂ. ವಿಶ್ವನಾಥ್, ಎಚ್.ಕೆ. ಜವರೇಗೌಡ, ಸಿ.ಎಸ್. ಪುಟ್ಟೇಗೌಡ, ಅರಕಲಗೂಡು ನಂಜುಂಡೇಗೌಡ, ಕಬ್ಬಳ್ಳಿ ರಂಗೇಗೌಡ, ಕಡಕಡಿ ಪೀರ್ಸಾಬ್, ಪಟೇಲ್ ಶಿವಪ್ಪ, ಎಂ.ಕೆ. ಶೇಷೇಗೌಡ ಮೊದಲಾದವರು ಇದ್ದರು.
ದೇವೇಗೌಡರಿಗಿಂತ ನಾನೇ ಸಾಹುಕಾರ
ಮಾಜಿ ಪ್ರಧಾನಿ ದೇವೇಗೌಡರಿಗಿಂತ ನಾನೇ ಸಾಹುಕಾರ, ದೇವೇಗೌಡರ ತಂದೆ ಬಳಿ ಇದ್ದದ್ದು 8 ಎಕರೆ ಜಮೀನು ಅಷ್ಟೇ, ನಮ್ಮತ್ರ 35 ಎಕರೆ ಇತ್ತು. ಅವರಿಗಿಂತ ನಾನೇ ಶ್ರೀಮಂತ. ಇದು ಶನಿವಾರ ಹಾಸನದಲ್ಲಿ ನಡೆದ ಬೃಹತ್ ಕಾರ್ಯಕರ್ತರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ ವರಸೆ.
ಬಳಲಿ ಬೆಂಡಾದ ಕಾರ್ಯಕರ್ತರು
ಕಾರ್ಯಕರ್ತರ ಸಭೆಯನ್ನು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಿದ್ದು ಮಧ್ಯಾಹ್ನ 1.30ಕ್ಕೆ. ಎರಡೂವರೆ ತಾಸಿಗೂ ಹೆಚ್ಚುಕಾಲ ತಡವಾಗಿ ಬಂದಿದ್ದರಿಂದ ಕಾರ್ಯಕರ್ತರು ಸಿಎಂಗಾಗಿ ಕಾದು ಬೇಸತ್ತಿದ್ದರು. ಅಲ್ಲದೇ, ಕಾರ್ಯಕರ್ತರು ಬಿಸಿಲಿನ ಬೇಗೆಗೆ ಬೆಂಡಾಗಿದ್ದರು.