'ಕಲಾ ಜಗತ್ತಿಗೂ ಜಾಗತೀಕರಣ ಲಗ್ಗೆ'
ಮೈಸೂರು: ಜಾಗತೀಕರಣದ ಪ್ರಭಾವ ಚಿತ್ರಕಲಾ ಜಗತ್ತನ್ನೂ ಬಿಟ್ಟಿಲ್ಲ. ಯಾವ ಕಲಾವಿದನ ಕಲಾಕೃತಿಗಳು ಗ್ಯಾಲರಿಯಲ್ಲಿ ಪ್ರದರ್ಶಿತವಾಗುತ್ತದೋ, ಅದನ್ನು ಶ್ರೇಷ್ಠ ಕಲಾಕೃತಿಯೆಂದು ಪರಿಗಣಿಸುವ ಮನೋಭಾವ ಹೆಚ್ಚಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಚ್. ಕೃಷ್ಣಯ್ಯ ವಿಷಾದಿಸಿದರು.
ರಾಮ್ಸನ್ಸ್ ಕಲಾ ಪ್ರತಿಷ್ಠಾನವು ನಜರಬಾದಿನ ಪ್ರತಿಮಾ ಕಲಾ ಗ್ಯಾಲರಿಯಲ್ಲಿ ಕಲಾ ಧಾರ ಚಿತ್ರಕಲಾ ಪ್ರದರ್ಶನದ ಅಂಗವಾಗಿ ಆಯೋಜಿಸಿರುವ ಮೂರನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾನುವಾರ ಕಲಾಂತರ ತಲಾಂತರ ತಿರುಪಳ್ಳಯ್ಯ ರಾಜು ಅವರ ಸಂಪ್ರದಾಯ ಸಿರಿ ಎಂಬ ವಿಷಯ ಕುರಿತು ಮಾತನಾಡಿದರು. ಸಾಂಪ್ರದಾಯಿಕ ಕಲೆಯು ಅನುಕರಣೀಯ ಕಲೆ ಎಂಬ ಅಪವಾದ ಸಲ್ಲದು. ಯಾವುದೇ ಸಾಂಪ್ರದಾಯಿಕ ಕಲಾವಿದ ಅನುಕರಣೆಯಿಂದ ಚಿತ್ರಕಲೆ ರಚಿಸುತ್ತಾನೆ ಎಂಬ ಆರೋಪವಿದೆ. ಶಿಲ್ಪಶಾಸ್ತ್ರದಲ್ಲಿ ದೇವಾನು ದೇವತೆಗಳ ಚಿತ್ರಗಳನ್ನು ಹಾಗೆಯೇ ರಚಿಸಬೇಕೆಂದು ಹೇಳಲಾಗಿದೆ. ಆದ್ದರಿಂದ ಅದನ್ನು ನೋಡಿ ಚಿತ್ರ ಬಿಡಿಸುತ್ತಾರೆ ಎಂಬುದೇ ಈ ಅಪವಾದ. ಆದರೆ ಪಾರಂಪರಿಕ ಚೌಕಟ್ಟಿನೊಳಗೆ ಕಲಾವಿದ ತನ್ನದೇ ಆದ ಹೊಸ ಆಯಾಮದಲ್ಲಿ ಸಾಂಪ್ರದಾಯಿಕ ಚಿತ್ರ ರೂಪಿಸಬಹುದು ಎಂದರು. ಕಲಾವಿದ ಕೆ.ಎಸ್. ಶ್ರೀಹರಿ ಮಾತನಾಡಿದರು.