ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಕುಡಿಯುವ ನೀರಿಗೆ ಅನುದಾನ ನೀಡಿ'

Rashmi Kasaragodu
Updated On : 30 Mar 2014, 11:19 am

ಹಾಸನ: ಕಡೂರು ಸೇರಿದಂತೆ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಹೆಚ್ಚಾಗಿದ್ದು, ಸರ್ಕಾರ ಕೂಡಲೇ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಬೇಕು ಎಂದು ಶಾಸಕ ಎಚ್.ಡಿ. ರೇವಣ್ಣ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 6 ತಾಲೂಕುಗಳು ಬರಪೀಡಿತಕ್ಕೆ ತುತ್ತಾಗಿವೆ ಎಂದು ಸರ್ಕಾರವೇ ಘೋಷಣೆ ಮಾಡಿದ್ದರು ಈವರೆಗೂ ಬರ ಪರಿಹಾರ ಕಾಮಗಾರಿಗಳನ್ನು ಕೆಲಸಗಳನ್ನು ನಿರ್ವಹಿಸಿಲ್ಲ. ಜಿಲ್ಲಾ ಪಂಚಾಯ್ತಿ ವತಿಯಿಂದ ಕುಡಿಯುವ ನೀರಿಗಾಗಿ ರು. 29.11 ಕೋಟಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿ 3 ತಿಂಗಳು ಕಳೆದರೂ ಈವರೆಗೂ ಸರ್ಕಾರ ಹಣ ನೀಡಿಲ್ಲ ಎಂದು ಆರೋಪಿಸಿದರು. ಆದ್ದರಿಂದ, ಕೂಡಲೇ ಸರ್ಕಾರ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದರು.
ಚರ್ಚ್‌ಗಳಿಗೆ ತೆರಳಿ ರೇವಣ್ಣ ಪ್ರಚಾರ
ಹಾಸನ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಭಾನುವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪರ ಬಿರುಸಿನ ಪ್ರಚಾರ ಕೈಗೊಂಡರು.
ನಗರದ ವೆಸ್ಲಿ ಚರ್ಚ್ ಮತ್ತು ಸ್ಲೇಟರ್ ಹಾಲ್ ಬಳಿ ಇರುವ ಹವಿಲ ಬಿಲ್ಡಿಂಗ್‌ನಲ್ಲಿ ಇರುವ ಫಾಲೋಮ್ ಆರ್ಮಿ ಫಾರ್ ಕ್ರೈಸ್ಟ್ ಚರ್ಚ್‌ಗಳಿಗೆ ಶಾಸಕ ಎಚ್.ಡಿ. ರೇವಣ್ಣ ಭೇಟಿ ನೀಡಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪರ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಕ್ರೈಸ್ತ ಬಾಂಧವರು ದೇವರು ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸಿದರು. ಇದೇ ವೇಳೆ ಶಾಸಕ ಎಚ್.ಎಸ್. ಪ್ರಕಾಶ್, ಜೆಡಿಎಸ್ ಕಾರ್ಯಾಧ್ಯಕ್ಷ ಚನ್ನವೀರಪ್ಪ, ಮುನಿ ವೆಂಕಟೇಗೌಡ, ಎಚ್.ಎಸ್. ಅನಿಲ್ ಕುಮಾರ್ ಹಾಗೂ ಇತರರು ಇದ್ದರು.
ದಲಿತ ಸಂಘಟನೆಗಳಿಂದ ಗೌಡರಿಗೆ ಬೆಂಬಲ
ಹಾಸನ: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಅಭ್ಯರ್ಥಿ ಎಚ್.ಡಿ. ದೇವೇಗೌಡರಿಗೆ ಬೆಂಬಲಿಸುವಂತೆ ನಾನಾ ದಲಿತ ಸಂಘಟನೆಗಳು ನಗರದ ಸ್ವಾಭಿಮಾನ ಭವನದಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡವು.  ಜೆಡಿಎಸ್ ಆಡಳಿತಾವಧಿಯಲ್ಲಿ ದಲಿತ ಸಮುದಾಯಗಳಿಗೆ ನೀಡಿರುವ ಕೊಡುಗೆಯನ್ನು ನೆನಪಿಸಿಕೊಂಡರು. ದಲಿತ ಸಂಘರ್ಷ ಸಮಿತಿ, ಮಾದಿಗ ದಂಡೋರ, ಪ್ರಜಾವಿಮೋಚನಾ ಚಳುವಳಿ, ಛಲವಾಧಿ ಮಹಾಸಭೆಗಳು ಸಭೆಯಲ್ಲಿ ಹಾಜರಿದ್ದವು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಕುಮಾರಸ್ವಾಮಿ, ಕೃಷ್ಣದಾಸ್, ಬಿ.ಪಿ. ಜಯರಾಮ್, ಮಂಜಣ್ಣ, ಜೆ. ಜಯರಾಂ, ಲಕ್ಷ್ಮಣ್, ವೀರರಾಜ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement