ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೈ ಸಚಿವರ ಆಸ್ತಿ ತನಿಖೆಯಾಗಲಿ

Rashmi Kasaragodu
Updated On : 30 Mar 2014, 11:19 am

ಕನ್ನಡಪ್ರಭ ವಾರ್ತೆ, ಹಾಸನ, ಮಾ. 30
ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರ ನಿರ್ಮೂಲನೆ ಮಾಡೋದೇ ಆದ್ರೆ ಮೊದಲು ಅವರ ಮಂತ್ರಿ ಮಂಡಲ ಮತ್ತು ಶಾಸಕರು ಹೊಂದಿರುವ ಆಸ್ತಿಪಾಸ್ತಿ ಬಗ್ಗೆ ಲೋಕಾಯುಕ್ತ ತನಿಖೆಗೆ ಒಪ್ಪಿಸಲಿ ಎಂದು ಶಾಸಕ ಎಚ್.ಡಿ. ರೇವಣ್ಣ ಸವಾಲು ಹಾಕಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಡಿ.ಕೆ. ಶಿವಕುಮಾರ್ ಅವರೊಬ್ಬರ ಆಸ್ತಿಯನ್ನು ಸಿಬಿಐಗೆ ಒಪ್ಪಿಸದೇ, ದೇವೇಗೌಡರ ಕುಟುಂಬರ ಆಸ್ತಿಯನ್ನು ಸಿಬಿಐಗೆ ಒಪ್ಪಿಸಲಿ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಅದಕ್ಕೆ ನಮ್ಮ ಒಪ್ಪಿಗೆ ಇದೆ. ನನ್ನನ್ನು ಸೇರಿದಂತೆ ಸಿದ್ದರಾಮಯ್ಯ, ಅವರ ಮಂತ್ರಿಮಂಡಲದವರು ಮತ್ತು ಶಾಸಕರೆಲ್ಲರ ಆಸ್ತಿಯನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಿ ತನಿಖೆ ಮಾಡಿಸಲಿ ಎಂದರು.
ಡೋಂಗಿ ರಾಜಕಾರಣ: ಲೋಕಾಯುಕ್ತ, ಸಿಒಡಿ ಹಾಗೂ ಎಲ್ಲಾ ರೀತಿಯ ತನಿಖೆಗಳನ್ನು ಎದುರಿಸಿ ಬಂದಿರುವ ರಾಜಕಾರಣಿಯೊಬ್ಬರು ಇದ್ದರೆ ಅದು ದೇವೇಗೌಡ ಮಾತ್ರ.  ನಾವು ಯಾವುದೇ ತನಿಖೆಗೂ ಹೆದರುವುದಿಲ್ಲ ಎಂದು ರೇವಣ್ಣ ಸವಾಲು ಹಾಕಿದರು.
ಗೂಳಿಗೆ ಹೆದರಿವುದಿಲ್ಲ: ಸಿದ್ದರಾಮಯ್ಯ ಅವರನ್ನು ಟೀಕಿಸಿದ ನಂತರ, ರೇವಣ್ಣನವರ ಟೀಕಾಸ್ತ್ರ ಸಚಿವ ಡಿ.ಕೆ. ಶಿವಕುಮಾರ್ ಕಡೆಗೆ ತಿರುಗಿತು. ಹಾಸನ ಜಿಲ್ಲೆಯನ್ನು ಟಾರ್ಗೆಟ್ ಮಾಡಿ, ಗೂಳಿ ಬಿಟ್ಟಿದ್ದೇವೆ ಎಂದು ಬಿಂಬಿಸುತ್ತಿದ್ದಾರೆ. ಆದ್ರೆ ನಾವು ಯಾವ ಗೂಳಿಗೂ ಹೆದರುವುದಿಲ್ಲ. ಜಿಲ್ಲೆಯ ಜನ ಗೂಳಿಯನ್ನು ಓಡಿಸಲು ಸಿದ್ದರಾಗಿದ್ದಾರೆ ಎಂದರು.
ಸಾಕ್ಷಿಗುಡ್ಡ ಬೇಕಾದಷ್ಟಿದೆ: ಜೆಡಿಎಸ್ ಮಾಡಿದ ಕಾರ್ಯಗಳಿಗೆ ಸಾಕ್ಷಿಗುಡ್ಡ ಎಲ್ಲಿದೆ ಎಂದು ಪ್ರಶ್ನಿಸಿದ್ದ ಡಿಕೆಶಿ ಟೀಕೆಗೆ ಉತ್ತರ ನೀಡಿದ ರೇವಣ್ಣ, ದೇವೇಗೌಡರು ರಾಜ್ಯಕ್ಕೆ ಬೇಕಾದಷ್ಟು ಕೊಡುಗೆಯನ್ನು ನೀಡಿದ್ದಾರೆ. ನೀರಾವರಿಗೆ ಹಣವನ್ನು ನೀಡಲು ಕೇಂದ್ರದಲ್ಲಿ ದೇವೇಗೌಡರು ಅಧಿಕಾರಕ್ಕೆ ಬರಬೇಕಾಯಿತು. ಈ ಬಗ್ಗೆ ಮುಖ್ಯಮಂತ್ರಿ ಹಣ ನೀಡಿಲ್ಲ ಅಂತ ಹೇಳಲಿ ನೋಡೋಣ. ರೈತರ ಸಾಲವನ್ನು ಮನ್ನಾ ಮಾಡಲು ಬೇರೆ ಪಕ್ಷದವರಿಗೆ ಆಗಲಿಲ್ಲ. ಅದಕ್ಕೆ ಕುಮಾರಸ್ವಾಮಿ ಅವರೇ ಬರಬೇಕಾಯಿತು. ಕೆಎಂಎಫ್‌ನಲ್ಲಿ ನನ್ನ ವಿರುದ್ಧ ಹಗರಣ ಆಗಿದೆ ಅಂತ ಸುಮ್ಮನೇ ಆರೋಪ ಮಾಡಿದರು ಎಂದರು.
ಕಿಡಿ: ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿ, ಹಾಸನ ರೈಲು ಮಾರ್ಗ, ಮೆಡಿಕಲ್ ಕಾಲೇಜು, ಕೃಷಿ ಕಾಲೇಜು, ಹೊಸ ಬಸ್ ನಿಲ್ದಾಣದಂತಹ ಯೋಜನೆಗಳನ್ನು ಮಾಡಿದ್ದು ಯಾರು? ಅದು ಸಾಕ್ಷಿ ಗುಡ್ಡೆ ಅಲ್ವಾ ಎಂದು ಕುಟುಕಿದರು ರೇವಣ್ಣ.
ಜಿಲ್ಲೆಗೆ ಮಂಜೂರಾಗಿದ್ದ ಐಐಟಿ ವರ್ಗಾಯಿಸಿದ್ದು ಯಾರು, ಹಾಸನ-ಅರಕಲಗೂಡು- ರಾಮನಾಥಪುರ- ಕೊಡಗು ರಸ್ತೆಯನ್ನು ಬೇಡ ಅಂತ ಅಸೆಂಬ್ಲಿಯಲ್ಲಿ ಹೇಳಿ, ತಮಗೆ ಬೇಕಾದ ಒಂದೆರಡು ಕಡತಗಳಿಗೆ ಸಹಿ ಮಾಡಿಸಿಕೊಂಡಿದ್ದು ಯಾರು ಎಂಬುದನ್ನು ಕಾಂಗ್ರೆಸ್ ತಿಳಿಯಬೇಕು ಎಂದು ಅವರು ಕಿಡಿಕಾರಿದರು.
3411 ಕಿಮೀ ರಸ್ತೆಗೆ ಜಿಲ್ಲೆಯಲ್ಲಿ ಹೊರ ಜಿಲ್ಲೆಗೆ ಸೇರುವಂತಹ ರಸ್ತೆ ಯೋಜನೆಗಳನ್ನು ವರ್ಡ್ ಬ್ಯಾಂಕ್‌ನಿಂದ ಅನುಮತಿ ನೀಡಿಸಿದ್ದೇ 2006ರಲ್ಲಿ ಅದನ್ನು ಬೇಡ ಅಂದವರು ಯಾರು, ದೇವೇಗೌಡರು ಸಿಎಂ ಆಗಿದ್ದಾಗ ಅಲ್ಪಸಂಖ್ಯಾತರಿಗೆ ಶೇ. 4ರಷ್ಟು ಮೀಸಲಾತಿ ನೀಡಿದರು. ಅದನ್ನು ಕಾಂಗ್ರೆಸ್ ನೀಡಿದರಾ ಎಂದು ಪ್ರಶ್ನಿಸಿದ ರೇವಣ್ಣ, ನಾವು ಯಾವುದನ್ನೂ ದಾಖಲೆ ಇಲ್ಲದೇ ಮಾತನಾಡೋದಿಲ್ಲ ಎಂದರು.
ಕಾಂಗ್ರೆಸಿಗರಿಗೆ ಭಯ: ಜಾಫರ್ ಷರೀಫ್ ಅವರು ದೇವೇಗೌಡರನ್ನು ಭೇಟಿ ಮಾಡಿದಾಕ್ಷಣ ಕಾಂಗ್ರೆಸ್‌ನವರಿಗೆ ಭಯ ಉಂಟಾಯಿತು ಎಂದ ರೇವಣ್ಣ, ಕಾಂಗ್ರೆಸ್‌ನಿಂದ ಜಾಫರ್ 'ಷರೀಫ್‌' ಆದ್ರು ಅಂತಾರೆ. ಅದೇ ಸಿ.ಎಂ. ಇಬ್ರಾಹಿಂ ಮಾತ್ರ ಏಕೆ ಕಾಂಗ್ರೆಸ್‌ನಲ್ಲಿ ಮೇಲೆ ಬರಲಿಲ್ಲ ಎಂದು ಪ್ರಶ್ನಿಸಿದರು.
ಮಾತೋಡಲ್ಲ: ಏತನ್ಮಧ್ಯೆ, ಶನಿವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಅವರು ತಮ್ಮನ್ನು ಏಕವಚನದಲ್ಲಿ ಕರೆದು ಟೀಕಿಸಿದ್ದರ ಬಗ್ಗೆ ಮಾತನಾಡಿದ ರೇವಣ್ಣ, 'ಸಂಸ್ಕೃತಿ ಇಲ್ಲದ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಮಾತನಾಡೋಲ್ಲ' ಎಂದು ಪ್ರತಿಕ್ರಿಯಿಸಿದರು
ಈ ಸಂದರ್ಭದಲ್ಲಿ ಶಾಸಕ ಎಚ್.ಎಸ್.ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಮುಖಂಡರಾದ ಕೆ.ಎಂ. ರಾಜೇಗೌಡ, ಚನ್ನವೀರಪ್ಪ ಹಾಗೂ ಇತರರು ಇದ್ದರು.




ಬಿಜೆಪಿ ಕಾಲಿಗೆ ಬಿದ್ದ ಕೈ ಅಭ್ಯರ್ಥಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದರೂ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನನ್ನನ್ನು ಗೆಲ್ಲಿಸಿ ಅಂತಾ ಬಿಜೆಪಿಯ ಪಾದಕ್ಕೆ ಬಿದ್ದಿದೆ ಎಂದು ರೇವಣ್ಣ ಛೇಡಿಸಿದರು. ಕಾಂಗ್ರೆಸ್- ಬಿಜೆಪಿ ಒಂದಾಗಿದ್ದು, ಅದು ಜಗಜ್ಜಾಹೀರು ಆಗಿದೆ. ಅದೇ ರೀತಿ ಮೈಸೂರಿನಲ್ಲಿಯೂ ಸಹ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ ನಾವು ಒಂದಾಗಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದರು.
ಪೊಲೀಸ್ ಜೀಪ್‌ನಲ್ಲೇ ಹಣ ಸಾಗಣೆ
ಜಿಲ್ಲೆಗೆ ಹೊರಗಡೆಯಿಂದ ಆಂಬುಲೆನ್ಸ್ ಹಾಗೂ ಪೊಲೀಸ್ ಜೀಪ್‌ಗಳಿಂದ ಹಣ ಬರುತ್ತಿದ್ದು, ಈ ಬಗ್ಗೆ ಚುನಾವಣಾ ಆಯೋಗ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಎಚ್ಚರವಹಿಸಬೇಕು ಎಂದು ರೇವಣ್ಣ ಆಗ್ರಹಿಸಿದ್ದಾರೆ. ಯಾರು ಹಣವನ್ನು ಕಳ್ಳ ಮಾರ್ಗದಿಂದ ಸಾಗಣಿ ಮಾಡುತ್ತಿದ್ದರೂ ಅವರನ್ನು ಬಂಧಿಸಿ ಕ್ರಮಕೈಗೊಳ್ಳಬೇಕು. ಕಾಂಗ್ರೆಸ್‌ನವರು ಆರೋಪ ಮಾಡಿರುವಂತಹ ಹಾಲಿ ಕ್ಯಾನ್‌ನಲ್ಲಿಯೂ ಹಣ ಬಂದರೆ ಸೀಜ್ ಮಾಡಿಕೊಳ್ಳಿ. ಆಂಬುಲೆನ್ಸ್ ಮತ್ತು ಪೊಲೀಸ್ ಜೀಪ್‌ನಲ್ಲಿ ಬರುತ್ತಿರುವುದನ್ನು ಬಿಡುವುದಿಲ್ಲ ಎಂದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement